ಬೆಂಗಳೂರು: ಇಂದಿನ ರಾಜ್ಯ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 3,172 ಕೋಟಿ ರೂ. ಮೀಸಲಿಡಲಾಗಿದೆ.
ಹೊಸ ಯೋಜನೆಗಳು:
* ನಮ್ಮ ಸರ್ಕಾರವು ಸ್ವಾತಂತ್ರ್ಯಯೋಧ ಸಂಗೊಳ್ಳಿ ರಾಯಣ್ಣನವರ ನೆನಪಿಗಾಗಿ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ’ ವನ್ನು ರಚನೆ ಮಾಡಿದೆ. ಅವರ ಜನ್ಮಸ್ಥಳವಾದ ಸಂಗೊಳ್ಳಿ ಮತ್ತು ಹುತಾತ್ಮರಾದ ನಂದಗಡದಲ್ಲಿ ಮುಂದಿನ ವರ್ಷಗಳಲ್ಲಿ 267 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
Advertisement
* 2012-13ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕಾಗಿ ಅನುಕ್ರಮವಾಗಿ ಮಾಹೆಯಾನ 750 ರೂ. ಮತ್ತು 850 ರೂ. ನೀಡಲಾಗುತ್ತಿತ್ತು. 2018-19ನೇ ಸಾಲಿನಲ್ಲಿ ಈ ಮೊತ್ತವನ್ನು ಅನುಕ್ರಮವಾಗಿ 1500 ರೂ. ಮತ್ತು 1600 ರೂ.ಗಳಿಗೆ ಹೆಚ್ಚಿಸಲಾಗುವುದು.
Advertisement
* ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶುಚಿ ಸಂಭ್ರಮ ಕಿಟ್ ಸೌಲಭ್ಯವನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೂ ಸಹ ವಿಸ್ತರಿಸಲಾಗುವುದು. ಖಾಸಗಿ ಅನುದಾನಿತ ಅನಾಥಾಲಯಗಳ ವಿದ್ಯಾರ್ಥಿಗಳ ಊಟದ ವೆಚ್ಚದ ದರಗಳನ್ನು ಮಾಹೆಯಾನ ತಲಾ 700 ರೂ. ಗಳಿಂದ 800 ರೂ.ಗಳಿಗೆ ಹೆಚ್ಚಿಸಲಾಗುವುದು.
Advertisement
Advertisement
* ವಿದ್ಯಾಸಿರಿ ಯೋಜನೆಯಡಿ 2018-19ನೇ ಸಾಲಿನಿಂದ ಫಲಾನುಭವಿಗಳ ಸಂಖ್ಯೆಯನ್ನು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹೆಚ್ಚಿಸಲಾಗುವುದು.
* ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿಯನ್ನು 6 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
* ಮುಂದಿನ 5 ವರ್ಷಗಳಲ್ಲಿ 750 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸುವ ಗುರಿ ಹೊಂದಲಾಗಿದ್ದು, 2018-19ನೇ ಸಾಲಿನಲ್ಲಿ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
* ಹಿಂದುಳಿದ ವರ್ಗಗಳ 2000 ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ವಿಶೇಷ ಕೋಚಿಂಗ್ ನೀಡಲಾಗುವುದು.
* ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ JEE, NEET, GATE, GMAT ಇತ್ಯಾದಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುವುದು.
* ಪೂರ್ಣಾವಧಿ ಪಿ.ಹೆಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು 5000 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸಲಾಗುವುದು.
* ಕೆ.ಐ.ಎ.ಡಿ.ಬಿ. ಮತ್ತು ಕೆ.ಎಸ್.ಎಸ್.ಐ.ಡಿ.ಸಿ.ಗಳಿಂದ ಕೈಗಾರಿಕಾ ಶೆಡ್ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ 2ಎ ಮತ್ತು ಪ್ರವರ್ಗ 2ಬಿ ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದು ಹಾಕಲಾಗುವುದು.
* ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಅಭಿವೃದ್ಧಿ ನಿಗಮವನ್ನು ಪುನರ್ ಸಂಘಟಿಸಲಾಗುವುದು.
* ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು ನಡೆಸುತ್ತಿರುವ ಖಾಸಗಿ ವಸತಿ ನಿಲಯಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ತಲಾ 5 ಲಕ್ಷ ರೂ. ಅನುದಾನ.
* ಹಿಂದುಳಿದ ಸಮುದಾಯಗಳಾದ ಸವಿತಾ ಸಮಾಜ, ತಿಗಳ, ಮಡಿವಾಳ ಮತ್ತು ಕುಂಬಾರರ ಆರ್ಥಿಕಾಭಿವೃದ್ಧಿಗಾಗಿ 100 ಕೋಟಿ ರೂ.ಗಳ ಮೀಸಲು.
* ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ದರ.
* ಅತಿ ಹಿಂದುಳಿದ ಬುಡಬುಡಕಿ, ಗೊಲ್ಲ, ಹೆಳವ, ಗೊಂದಳಿ, ಜೋಗಿ, ಶಿಕ್ಕಲಿಗರ್, ಪಿಚಗುಂಟಲ, ದೊಂಬಿದಾಸ ಇತ್ಯಾದಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.