ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿರುವ ನಟಿ ಮಾನ್ವಿತಾ ಕಾಮತ್(Manvita Kamath) ಈಗ ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಮೂಲಕ ಬೆಳ್ಳಿತೆರೆ ಪ್ರವೇಶಿಸಿ, ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಬ್ಲಾಕ್ಬಸ್ಟರ್ ‘ಟಗರು’ ಚಿತ್ರದ ‘ಪುನರ್ವಸು’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಮಾನ್ವಿತಾ, ಈಗ ಆ್ಯಕ್ಷನ್-ಕಟ್ ಹೇಳಲು ಅಣಿಯಾಗುತ್ತಿದ್ದಾರೆ.
ಸಾಮಾನ್ಯವಾಗಿ ನಟಿಯರು ನಟನಾ ರಂಗದಿಂದ ನಿವೃತ್ತರಾದ ಬಳಿಕವೋ ಅಥವಾ ದೀರ್ಘಕಾಲದ ನಟನಾ ಅನುಭವದ ನಂತರವೋ ತೆರೆಮರೆಯ ಜವಾಬ್ದಾರಿಗಳನ್ನು ಹೊರುತ್ತಾರೆ. ಆದರೆ, ಮಾನ್ವಿತಾ ಕಾಮತ್ ನಟನೆಯ ಉತ್ತುಂಗದಲ್ಲಿರುವಾಗಲೇ, ಚಿಕ್ಕ ವಯಸ್ಸಿನಲ್ಲೇ ನಿರ್ದೇಶನದ ಕಡೆ ಮುಖ ಮಾಡಿರುವುದು ಗಾಂಧಿನಗರದಲ್ಲಿ ಕುತೂಹಲ ಮೂಡಿಸಿದೆ.
ಮಾನ್ವಿತಾ ಕಾಮತ್ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಪ್ರಬಲ ಮಹಿಳಾ ಪ್ರಧಾನ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದು, ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram ) ನಟಿಸಲಿದ್ದಾರೆ ಎಂಬ ಬಲವಾದ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಪ್ರಮುಖ ನಟಿಯರು ಈ ಪ್ರಾಜೆಕ್ಟ್ ಮೂಲಕ ಒಂದಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದನ್ನೂ ಓದಿ: ನನಗೆ ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ ಗೊತ್ತಾ: ಪತ್ನಿ ಮಾತಿಗೆ ‘ಹೌದಾ ಪುಟ್ಟ..’ ಅಂತ ನಕ್ಕ ದರ್ಶನ್
ಚಿತ್ರದ ಶೀರ್ಷಿಕೆ ಮತ್ತು ಅಧಿಕೃತ ಲಾಂಚ್ ಶೀಘ್ರದಲ್ಲೇ ಮುಹೂರ್ತದ ಮೂಲಕ ನಡೆಯಲಿದ್ದು, ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ.
