-ಸ್ಟಿಂಗ್ ಮಧ್ಯೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಬಿವೈವಿ
ಮೈಸೂರು: 8 ವರ್ಷ ಸಿಎಂ ಆಗಿದ್ದೇನೆ, 17 ಬಜೆಟ್ ಮಂಡಿಸಿದ್ದೇನೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಹೇಳಿದ್ದಾರೆ.
ಮೈಸೂರಿನ (Mysuru) ಕೆ.ಆರ್ ನಗರದಲ್ಲಿ (KR Nagar) ನಡೆದ ಬಸವ ಜಯಂತಿ ಕಾರ್ಯಕ್ರಮದ ಮಾತನಾಡಿದ ಅವರು, ಸಿದ್ದರಾಮಯ್ಯ 8 ವರ್ಷ ಸಿಎಂ ಆಗಿದ್ದೇನೆ. 17 ಬಜೆಟ್ ಮಂಡಿಸಿದ್ದೇನೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ನಾನು 5 ವರ್ಷ ಸಿಎಂ ಆಗಿ ಇದಿದ್ರೆ, ಬೀದರ್ನಲ್ಲಿ ಅನುಭವ ಮಂಟಪ ಕೆಲಸ ಮುಗಿಸುತ್ತಿದೆ. ನಿರ್ಮಾಣ ಶುರು ಮಾಡಿದ್ದೇನೆ. ಐದು ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಈ ಕಾಮಗಾರಿ ಮುಗಿಸುತ್ತಿದೆ, ಇವತ್ತಿನ ಸಿಎಂ ಕೂಡ ಈ ಕಾಮಗಾರಿ ಮುಗಿಸಬಹುದು ಎಂದುಕೊಂಡಿದ್ದೇನೆ. ಕೆ.ಆರ್ ನಗರದಲ್ಲೂ ಬಸವ ಭವನ ನಿರ್ಮಾಣ ಆಗಬೇಕಿದೆ. ನಾನು ಈಗ ಬರೀ ಶಾಸಕ. ಆದರೂ ನನ್ನ ಮಾತನ್ನು ಈಶ್ವರ್ ಖಂಡ್ರೆ ಅಂತವರು ಕೇಳುತ್ತಾರೆ ಅಂದುಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರಿಷತ್ ಫೈಟ್ನಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ; ಕಾಂಗ್ರೆಸ್ ಎಷ್ಟು ಸ್ಥಾನಗಳನ್ನ ಗೆದ್ದಿರಬಹುದು ಎಂದು ಊಹಿಸಿ? – ಕಾಲೆಳೆದ ಮೋದಿ
ಇವತ್ತಿಗೂ ಜಾತಿ ವ್ಯವಸ್ಥೆ ಇದೆ. ಧರ್ಮಗಳ ನಡುವೆ ದ್ವೇಷವಿದೆ, ವೈಮನಸ್ಸಿದೆ. ಜಾತಿಯ ವೈಮನಸ್ಸು ಹೆಚ್ಚು ಮಾಡುವ ಪಟ್ಟಭದ್ರ ಹಿತಾಸಕ್ತಿಗಳು ಹೆಚ್ಚಿವೆ. ಎಲ್ಲರಿಗೂ ಸಂವಿಧಾನ ಪೀಠಿಕೆ ಓದಿಸಲು ನಾನು ಶುರು ಮಾಡಿಸಿದೆ. ಬುದ್ದ, ಬಸವ, ಅಂಬೇಡ್ಕರ್ ಕಂಡ ಕನಸಿನ ಭಾರತ ಇನ್ನೂ ನಿರ್ಮಾಣ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿದ್ದ ಜಾತಿ ತಾರತಮ್ಯ, ಅಸ್ಪೃಶ್ಯತೆ, ಲಿಂಗಭೇದ ಮತ್ತು ಅನೇಕ ಅನಿಷ್ಟಗಳ ವಿರುದ್ಧ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಜಾತಿ, ವರ್ಗ, ಲಿಂಗದ ಆಧಾರದಲ್ಲಿ ಮನುಷ್ಯರನ್ನು ವಿಭಜಿಸದೆ ಎಲ್ಲರೂ ಸಮಾನರು ಎಂಬ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ್ದರು.
ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಗುಂಪಿಗೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲಕ್ಕೆ ಸೇರಿದವರು. ಎಲ್ಲ ಮನುಷ್ಯರೂ ಸಮಾನ ಗೌರವದಿಂದ ಬದುಕಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು.
ಆದರೆ ಸುಮಾರು 900 ವರ್ಷಗಳ ನಂತರವೂ ಬಸವಣ್ಣನವರ ಕನಸಿನ ಸಮಾಜ ನಿರ್ಮಾಣವಾಗಿಲ್ಲ ಎನ್ನುವುದು ವಿಷಾದನೀಯ. ಇಂದಿಗೂ ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ, ಅಸ್ಪೃಶ್ಯತೆ, ಧರ್ಮಗಳ ನಡುವೆ ಸಂಘರ್ಷ ಮತ್ತು ಜಾತಿಗಳ ನಡುವೆ ವೈಮನಸ್ಸು ಮುಂದುವರಿದಿವೆ. ಜಾತಿ ಮತ್ತು ದ್ವೇಷವನ್ನು ಬಿತ್ತಿ ಪೋಷಿಸುವ ಪಟ್ಟಭದ್ರ ಹಿತಾಸಕ್ತಿಗಳೂ ನಮ್ಮ ನಡುವೆಯೇ ಇವೆ.
“ಇವನಾರವ ಇವನಾರವ ಇವನಾರವನೆಂದೆನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನ್ನಿರಯ್ಯ” ಎಂದು ಬಸವಣ್ಣನವರು ಅಂದೇ ಮಾನವೀಯತೆಯ ಮಹತ್ವವನ್ನು ಸಾರಿದ್ದರು.
ಬಸವಣ್ಣನವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸಿವೆ. ಸುಮಾರು 2,500 ವರ್ಷಗಳ ಹಿಂದೆ ಬುದ್ಧರು, 900 ವರ್ಷಗಳ ಹಿಂದೆ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ಚಿಂತನೆಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿಯೂ ಕಾಣಬಹುದು.
ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಉದ್ದೇಶದಿಂದಲೇ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಂದು ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸ ಮಾಡಿದ್ದೆ.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳು ನಿವಾರಣೆಯಾಗಬೇಕು. ವಿಶೇಷವಾಗಿ ಬಡವರು, ಶೋಷಿತರು ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಶಕ್ತಿ ತುಂಬಬೇಕು.
ಬಸವಣ್ಣನವರ ‘ಕಾಯಕವೇ ಕೈಲಾಸ’ ಮತ್ತು ದಾಸೋಹದ ತತ್ವಗಳು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಮಹತ್ವವನ್ನು ಸಾರುತ್ತವೆ. ಯಾರೊಬ್ಬರೂ ಶ್ರಮವಿಲ್ಲದೆ ಬದುಕಬಾರದು, ದುಡಿಮೆಯ ಫಲ ಕೆಲವರಿಗಷ್ಟೇ ಸೀಮಿತವಾಗಬಾರದು ಎಂಬುದು ಬಸವಣ್ಣನವರ ಚಿಂತನೆಯಾಗಿತ್ತು.
ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಮಾಜ ನಿರ್ಮಾಣದ ಉದ್ದೇಶದಿಂದ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ಮಹತ್ವದ ವೇದಿಕೆಯಾಗಿತ್ತು. ಇಂದಿನ ಸಂಸತ್ತು ಮತ್ತು ವಿಧಾನಸಭೆಗೆ ಹೋಲಿಸಬಹುದಾದ ಈ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ವರ್ಗದವರಿಗೂ ಭಾಗವಹಿಸುವ ಅವಕಾಶವಿತ್ತು. ವಿಶೇಷವಾಗಿ ಮಹಿಳೆಯರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರು.
ಅನುಭವ ಮಂಟಪದ ಅಧ್ಯಕ್ಷರಾಗಿ ಅಲ್ಲಮಪ್ರಭುಗಳು ಕಾರ್ಯನಿರ್ವಹಿಸಿದ್ದರು. ಸಮಾಜದ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದವರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶ ಕಲ್ಪಿಸಲಾಗಿತ್ತು. ಇದು ಬಸವಣ್ಣನವರ ಸಮಾನತೆಯ ಆಶಯಕ್ಕೆ ಸಾಕ್ಷಿಯಾಗಿದೆ.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪದ ಪುನರ್ನಿರ್ಮಾಣಕ್ಕಾಗಿ ಗೋ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೆ. ಸಮಿತಿಯ ವರದಿ ಆಧರಿಸಿ ಅನುಭವ ಮಂಟಪದ ನಿರ್ಮಾಣಕ್ಕಾಗಿ ₹280 ಕೋಟಿ ಬಿಡುಗಡೆ ಮಾಡಿದ್ದೆ. ನಮ್ಮ ಆಡಳಿತಾವಧಿಯಲ್ಲಿಯೇ ಈ ಕೆಲಸವನ್ನು ಪ್ರಾರಂಭಿಸಲಾಗಿತ್ತು. ಅನುಭವ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ.
2013ರ ಮೇ 13ರಂದು ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸುವ ಅವಕಾಶ ದೊರೆತಿದ್ದು ಕಾಕತಾಳೀಯವಾಗಿದ್ದರೂ ನನ್ನ ಬದುಕಿನಲ್ಲಿ ಸಂತೋಷ ತಂದ ಮಹತ್ವದ ಸಂಗತಿಯಾಗಿದೆ.
ಪರಸ್ಪರ ಪ್ರೀತಿ, ಸಹಬಾಳ್ವೆ, ಸಮಾನತೆ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವನ್ನು ನಿರ್ಮಿಸುವುದೇ ವಿಶ್ವಗುರು ಬಸವಣ್ಣನವರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
– ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ
— Siddaramaiah (@siddaramaiah) October 28, 2026
ಇನ್ನು ವೇದಿಕೆಯಲ್ಲಿ ಸಿದ್ದರಾಮಯ್ಯ ಎದುರೇ ತಂದೆ ಯಡಿಯೂರಪ್ಪ ಬಗ್ಗೆ ವಿಜಯೇಂದ್ರ ಹಾಡಿ ಹೊಗಳಿದ್ದಾರೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪ. ವೀರಶೈವ-ಲಿಂಗಾಯತರನ್ನು ಒಗ್ಗೂಡಿಸುವ ಕೆಲಸವನ್ನು ನಾವು ಮಾಡಬೇಕು. ಅವಕಾಶವಾದಿ ರಾಜಕಾರಣ ಹೆಚ್ಚಾಗಿದೆ. ಮೆಟ್ಟಿಲು ಏರಿದ ಮೇಲೆ ಮೆಟ್ಟಿಲು ಮರೆಯುವ ರೀತಿ ರಾಜಕಾರಣ ಆಗಿದೆ. ಚಿತ್ರ ನಟರಿಗಿಂತ ಹೆಚ್ಚಾದ ನಟನೆಯನ್ನು ರಾಜಕೀಯದವರು ಮಾಡುತ್ತಿದ್ದಾರೆ ಅಂತ ವಿರೋಧಿಗಳಿಗೆ ವೇದಿಕೆಯಲ್ಲೇ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.
ಸ್ಟಿಂಗ್ ಆಪರೇಷನ್ ಪಾಲಿಟಿಕ್ಸ್ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಅಕ್ಕಪಕ್ಕದಲ್ಲೇ ಕುಳಿತಿದ್ರು. ವೇದಿಕೆಯಿಂದ ನಿರ್ಗಮಿಸುವಾಗ ಸಿದ್ದರಾಮಯ್ಯನವರಿಗೆ ವಿಜಯೇಂದ್ರ ಕೈಮುಗಿದು ನಮಸ್ಕರಿಸಿದ್ದು, ಬಿವೈವಿಗೆ ಬೆನ್ನುತಟ್ಟಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲೂ ಯಶ್ ರಾವಣಾರ್ಭಟ – ಹಸಿರು ಸೀರೆಯನ್ನುಟ್ಟು ಬಂದ ರಾಧಿಕಾಗೆ ಫ್ಯಾನ್ಸ್ ಫಿದಾ
