ಚಿಕ್ಕಮಗಳೂರು: ಭೀಕರ ಮಳೆ ಮತ್ತು ಪ್ರವಾಹದಿಂದಾಗಿ ನೂರಾರು ಮಂದಿ ಮೃತಪಟ್ಟು, ಸಾವಿರಾರು ಜನರು ನಾಪತ್ತೆಯಾಗಿ ಕಂಗಾಲಾಗಿರುವ ನೇಪಾಳದ ದುರಂತ (Nepal Flood Tragedy) ಸ್ಥಿತಿಗೆ ಶೃಂಗೇರಿ(Sringeri) ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದಲ್ಲಿರುವ ನೇಪಾಳದ ಸಂತ್ರಸ್ತ ಜನತೆಗೆ ಶೃಂಗೇರಿ ಮಠವು(Sharada Peetham) ಸಂಪೂರ್ಣ ನೆರವು ನೀಡಲು ಸನ್ನದ್ಧವಾಗಿದೆ. ಪ್ರಕೃತಿಯ ಮುನಿಸಿಗೆ ತುತ್ತಾಗಿರುವ ನೇಪಾಳದ ಜನತೆಗೆ ಅಗತ್ಯ ಆಹಾರ, ದಿನಬಳಕೆ ವಸ್ತುಗಳು ಹಾಗೂ ಅಗತ್ಯ ನೆರವು-ಪರಿಹಾರ ಕಾರ್ಯಗಳನ್ನು ತಕ್ಷಣವೇ ಒದಗಿಸುವಂತೆ ಮಠದ ಆಡಳಿತಾಧಿಕಾರಿಗಳಿಗೆ ಕಿರಿಯ ಶ್ರೀಗಳು ನಿರ್ದೇಶನ ನೀಡಿದ್ದಾರೆ.
ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಆಸರೆಯಾಗಲು ಶೃಂಗೇರಿ ಪೀಠವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಾಕೃತಿಕ ದುರಂತದಲ್ಲಿ ಅಸುನೀಗಿದ ನೂರಾರು ಮುಗ್ಧರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಸೂರು-ಕುಟುಂಬಗಳನ್ನು ಕಳೆದುಕೊಂಡಿರುವ ಜನರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಒಂದೇ ಮನೆಯಲ್ಲಿ 23 ಮೃತದೇಹಗಳು ಪತ್ತೆ! – ನೇಪಾಳ ಪ್ರವಾಹದ ಭೀಕರತೆಗೆ ಬೆಚ್ಚಿಬಿದ್ದ ರಕ್ಷಣಾ ತಂಡ
ಇಡೀ ನೇಪಾಳ ದೇಶವು ಈ ಕಠಿಣ ವಿಪತ್ತಿನಿಂದ ಆದಷ್ಟು ಶೀಘ್ರವಾಗಿ ಮುಕ್ತವಾಗಿ, ಪುನಃ ಅಭಿವೃದ್ಧಿ ಹಾಗೂ ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ಜಗದ್ಗುರುಗಳು ಹಾರೈಸಿದ್ದಾರೆ.
