ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಸ್ಪಷ್ಟನೆ ನೀಡಿದೆ. ಪುಸ್ತಕದ ಹೆಸರಿಗೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ‘ಕೃಷ್ಣ’ ಎಂಬುದು ಕೃಷ್ಣಾ ನದಿಯ ಹೆಸರಾಗಿದೆ ಎಂದು ತಳಿಸಿದೆ.
ಇತ್ತೀಚೆಗೆ ಬಿಡುಗಡೆಯಾದ 6ನೇ ತರಗತಿಯ ಕನ್ನಡ (ಆರ್-3) ಪಠ್ಯಪುಸ್ತಕಕ್ಕೆ(Text Book) ‘ಕೃಷ್ಣ’ (Krishna)ಎಂದು ಹೆಸರು ಇಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಜೊತೆಗೆ, ಪಠ್ಯಪುಸ್ತಕದಲ್ಲಿ ಸಸ್ಯಾಹಾರವನ್ನು ಮಾತ್ರ ಪ್ರೋತ್ಸಾಹಿಸಲಾಗಿದೆ ಮತ್ತು ಮಾಂಸಾಹಾರವನ್ನು ಕಡೆಗಣಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಎನ್‌ಸಿಇಆರ್‌ಟಿ, ಎಲ್ಲ ಆರ್-3 ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ನದಿಗಳ ಹೆಸರನ್ನೇ ಇಡಲಾಗಿದೆ ಎಂದು ತಿಳಿಸಿದೆ.
ಹಿಂದಿ ಪಠ್ಯಪುಸ್ತಕಕ್ಕೆ ‘ಗಂಗಾ’, ಇಂಗ್ಲಿಷ್ ಪಠ್ಯಪುಸ್ತಕಕ್ಕೆ ‘ಕಾವೇರಿ’ ಹಾಗೂ ಉರ್ದು ಪಠ್ಯಪುಸ್ತಕಕ್ಕೆ ‘ಜಮುನಾ’ ಎಂದು ಹೆಸರು ಇಡಲಾಗಿದೆ. ಅದೇ ಮಾದರಿಯಲ್ಲಿ ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಕೃಷ್ಣಾ ನದಿ ಕರ್ನಾಟಕದ ಸಂಸ್ಕೃತಿ, ಭೌಗೋಳಿಕತೆ ಹಾಗೂ ಜನಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಕಾರಣ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.
ಮಾಂಸಾಹಾರ ವಿರೋಧ ಇಲ್ಲ
ಪಠ್ಯಪುಸ್ತಕದಲ್ಲಿ ಸಸ್ಯಾಹಾರವನ್ನು ಮಾತ್ರ ಬೆಂಬಲಿಸಲಾಗಿದೆ ಎಂಬ ಆರೋಪವನ್ನೂ NCERT ತಳ್ಳಿ ಹಾಕಿದೆ. 6ನೇ ಅಧ್ಯಾಯವಾದ ‘ಆರೋಗ್ಯವೇ ಸಂಪತ್ತು’ ಪಾಠದಲ್ಲಿ ಸಮತೋಲಿತ ಆಹಾರದ ಬಗ್ಗೆ ವಿವರಿಸಲಾಗಿದೆ. ಹಾಲು, ಹಸಿರು ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಗಿದೆ.
ಪಾಠದಲ್ಲಿರುವ ಚಿತ್ರಗಳಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ರೀತಿಯ ಆಹಾರ ಪದಾರ್ಥಗಳನ್ನು ತೋರಿಸಲಾಗಿದೆ ಎಂದು NCERT ಹೇಳಿದೆ. ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಉಲ್ಲೇಖವೂ ಪಾಠದಲ್ಲಿದೆ. “ಸಮತೋಲಿತ ಆಹಾರ ಎಂದರೇನು?” ಎಂಬ ಪ್ರಶ್ನೆಯ ಮೂಲಕ ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದೆ.
ವಿವಾದಗಳ ನಡುವೆ ಸ್ಪಷ್ಟನೆ
ಪಠ್ಯಪುಸ್ತಕದ ಶೀರ್ಷಿಕೆ ಹಾಗೂ ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ NCERT ಈ ಸ್ಪಷ್ಟನೆ ನೀಡಿದೆ. ಪುಸ್ತಕದಲ್ಲಿ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಿಲ್ಲ. ಹಾಗೆಯೇ ಮಾಂಸಾಹಾರವನ್ನು ವಿರೋಧಿಸಿಲ್ಲ. ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಪಾಠದ ಉದ್ದೇಶ ಎಂದು ಸಂಸ್ಥೆ ಹೇಳಿದೆ.ಇದನ್ನೂ ಓದಿ: NCERT ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ
ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2023ರ ಮಾರ್ಗಸೂಚಿಗಳ ಅನ್ವಯ ಗುಣಮಟ್ಟದ ಹಾಗೂ ಎಲ್ಲರನ್ನು ಒಳಗೊಂಡ ಪಠ್ಯಪುಸ್ತಕಗಳನ್ನು ರೂಪಿಸಲಾಗುತ್ತಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.ಇದನ್ನೂ ಓದಿ: Tungabhadra Dam | ಮೂರು ರಾಜ್ಯಗಳ ಸಿಎಂ ಸಮ್ಮುಖದಲ್ಲಿ 33 ಕ್ರೆಸ್ಟ್ ಗೇಟ್ ಲೋಕಾರ್ಪಣೆ
