ಬೆಂಗಳೂರು: ನಿನ್ನೆ ಸಂಜೆಯಿಂದ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Purple Line) ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಯಶಸ್ವಿಯಾಗಿ ಸರಿಪಡಿಸಿದ್ದು, ಇಂದು (ಜೂನ್ 24) ಬೆಳಿಗ್ಗೆ 5 ಗಂಟೆಯಿಂದ ರೈಲು ಸಂಚಾರ ಎಂದಿನಂತೆ ಆರಂಭವಾಗಿದೆ.
ನಿನ್ನೆ ಸಂಜೆ 6:30ರ ಸುಮಾರಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ವ್ಯಾಪ್ತಿಯಲ್ಲಿ ಮೆಟ್ರೋದ ಥರ್ಡ್ ರೈಲ್ ಸಿಸ್ಟಮ್‌ನ(ರೈಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಹಳಿ ವ್ಯವಸ್ಥೆ)ನ ಕರೆಂಟ್ ಕಲೆಕ್ಟರ್ ಶೂನಲ್ಲಿ ದೋಷ ಕಾಣಿಸಿಕೊಂಡಿತ್ತು. ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ಇದನ್ನೂ ಓದಿ: ವಿದ್ಯುತ್ ಸರಬರಾಜಲ್ಲಿ ಸಮಸ್ಯೆ – ನೇರಳೆ ಮಾರ್ಗದ ಮೆಟ್ರೋ ಸಂಚಾರ ಬಂದ್
ಸಮಸ್ಯೆಯ ಗಾಂಭೀರ್ಯತೆಯನ್ನು ಅರಿತ ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡ ಹಾಗೂ ಉನ್ನತ ಅಧಿಕಾರಿಗಳು ತಡರಾತ್ರಿಯವರೆಗೂ ಕಬ್ಬನ್ ಪಾರ್ಕ್ ನಿಲ್ದಾಣದಲ್ಲೇ ಬೀಡುಬಿಟ್ಟಿದ್ದರು. ತಡರಾತ್ರಿ ಹೊಸ ಕರೆಂಟ್ ಕಲೆಕ್ಟರ್ ಶೂ ಕ್ಯಾಪ್ ತರಿಸಿ, ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ತದನಂತರ ಯಶಸ್ವಿ ಟ್ರಯಲ್ ರನ್ ನಡೆಸಿ ಹಳಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲಾಯಿತು.
ಇಂದು ಬೆಳಿಗ್ಗೆ 5 ಗಂಟೆಯಿಂದಲೇ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಸಂಚರಿಸುತ್ತಿವೆ. ತಾತ್ಕಾಲಿಕ ಸೇವಾ ವ್ಯತ್ಯಯದ ಸಮಯದಲ್ಲಿ ಸಹಕರಿಸಿದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಧನ್ಯವಾದ ತಿಳಿಸಿದೆ.
