ಮೈಸೂರು: ನಾಡಹಬ್ಬ ಮೈಸೂರು ದಸರಾ(Mysuru Dasara) ಮಹೋತ್ಸವ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಗೆ ಮರಳಿನ ಮೂಟೆ ಹೊರಿಸಿ ತೂಕದ(Weight Bearing Rehearsals) ತಾಲೀಮು ಯಶಸ್ವಿಯಾಗಿ ಆರಂಭಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಭುಗೌಡ ಅವರ ನೇತೃತ್ವದಲ್ಲಿ ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಈ ಭಾರ ಹೊರುವ ತಾಲೀಮು ನಡೆಯಿತು.
ಮೊದಲ ದಿನದ ತಾಲೀಮಿನಲ್ಲಿ ಮಹೇಂದ್ರ ಆನೆಗೆ ಒಟ್ಟು 700 ಕೆಜಿ ತೂಕ ಹೊರಿಸಿ ಅಭ್ಯಾಸ ಮಾಡಿಸಲಾಯಿತು. ಇದರಲ್ಲಿ 350 ಕೆಜಿ ಮರಳಿನ ಮೂಟೆ ಹಾಗೂ 350 ಕೆಜಿ ತೂಕದ ನಮ್ದಾ, ಗಾದಿ, ಚಾಪು ಮತ್ತು ಕಬ್ಬಿಣದ ತೊಟ್ಟಿಲು ಸೇರಿವೆ. ಭಾರ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಮಹೇಂದ್ರನಿಗೆ ಲಕ್ಷ್ಮೀ ಮತ್ತು ಕಾವೇರಿ ಆನೆಗಳು ಸಾಥ್ ನೀಡಿದವು.

ಅಂಬಾರಿ ಹೊರುವ ರೇಸ್‌ನಲ್ಲಿ ಮಹೇಂದ್ರ, ಪ್ರಶಾಂತ, ಏಕಲವ್ಯ ಹಾಗೂ ಧನಂಜಯ ಆನೆಗಳಿದ್ದು, ಹಂತ ಹಂತವಾಗಿ ಈ ನಾಲ್ಕೂ ಆನೆಗಳಿಗೂ ಭಾರದ ತಾಲೀಮು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Mysuru Dasara: ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ
ಈ ಕುರಿತು ಮಾಹಿತಿ ನೀಡಿದ ಡಿಸಿಎಫ್ ಪ್ರಭುಗೌಡ, “ಮೊದಲ ಹಂತವಾಗಿ ಮಹೇಂದ್ರ ಆನೆಗೆ ತಾಲೀಮು ಆರಂಭಿಸಿದ್ದೇವೆ. ಸಂಪೂರ್ಣ ತರಬೇತಿಯ ಬಳಿಕವಷ್ಟೇ ಅಂಬಾರಿ ಹೊರಲಿರುವ ಅಂತಿಮ ಆನೆಯನ್ನು ಆಯ್ಕೆ ಮಾಡಲಾಗುವುದು. ಮೊದಲ ತಂಡದಲ್ಲಿ ಬಂದಿರುವ ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಎರಡನೇ ತಂಡದ ಆನೆಗಳು ಹಾಗೂ ಅಭಿಮನ್ಯು ಆನೆಯನ್ನು ಅರಮನೆಗೆ ಕರೆತರುವ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು. ಜಂಬೂ ಸವಾರಿ ಮೆರವಣಿಗೆಗೆ ಎಲ್ಲಾ ಗಜಪಡೆಗಳು ಸಂಪೂರ್ಣವಾಗಿ ಸಜ್ಜಾಗುತ್ತಿವೆ,” ಎಂದು ಸ್ಪಷ್ಟಪಡಿಸಿದರು.
