ಬಾಗಲಕೋಟೆ: ನಗರದ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ಬಳಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ(Shri Krishna Janmashtami) ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ತಾರಕಕ್ಕೇರಿ ಮಾರಾಮಾರಿಗೆ ತಿರುಗಿದ ಘಟನೆ ನಡೆದಿದೆ.
ವೇದಿಕೆಯ ಮೇಲೆ ಹಾಡು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಕೆಲವೇ ಕ್ಷಣಗಳಲ್ಲಿ ಪರಸ್ಪರ ವಾಗ್ದಾಳಿ ಮುಂದುವರಿದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದನ್ನೂ ಓದಿ: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ: ಕರಕಲಾಯಿತು ಖಾಲಿ ಬೋಗಿ
ಉತ್ಸವ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರಿಂದ ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಗುಂಪನ್ನು ಚದುರಿಸಲು ಲಾಠಿ ಬೀಸಿ(Police Lathi Charge) ಸಾರ್ವಜನಿಕರನ್ನು ನಿಯಂತ್ರಿಸಿದರು.
ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದಾಗಿ ಯಾವುದೇ ಭಾರಿ ಅಹಿತಕರ ಘಟನೆ ಸಂಭವಿಸದೆ ಪರಿಸ್ಥಿತಿ ತಿಳಿಯಾಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಶಾಂತಿ ಕಾಪಾಡಲಾಗಿದೆ.

