ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್) ರೈಲು ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ಭಾರಿ ಬೆಂಕಿ(Fire) ಅವಘಡ ಸಂಭವಿಸಿದ್ದು, ಪ್ಲಾಟ್‌ಫಾರ್ಮ್ ನಂ. 1 ರಲ್ಲಿ ನಿಲ್ಲಿಸಲಾಗಿದ್ದ ರೈಲಿನ ಖಾಲಿ ಬೋಗಿಯೊಂದು(Coach) ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ರಾತ್ರಿ ಸುಮಾರು 11:30ರ ವೇಳೆಗೆ ಬೋಗಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆ ಇಡೀ ಬೋಗಿಯನ್ನು ಆವರಿಸಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು. ಬೋಗಿಯಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು(Railway Police) ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
