ಮುಂಬೈ: ತೃತೀಯಲಿಂಗಿಯಂತೆ ನಟಿಸಿ ವ್ಯಕ್ತಿಯೊಬ್ಬ ಗಗನಸಖಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈ (Mumbai) ಮಧ್ಯ ಭಾಗದ ಪೊವೈನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಶೇಷರಾವ್ ಶಿಂಧೆ ಬಂಧಿತ ಆರೋಪಿ. ಗಂಡನ ಅನಾರೋಗ್ಯ ಗುಣಪಡಿಸಲು ಕೆಟ್ಟ ದೃಷ್ಟಿ ತೆಗೆಯುವುದಾಗಿ ನಂಬಿಸಿ ಗಗನಸಖಿ ಮನೆಗೆ ಪ್ರವೇಶಿಸಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ರಾಜಸ್ಥಾನ ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಸಿಜೆಪಿ ನಾಯಕರಿಗೆ ಥಳಿತ – ಹೊಡೆದು ಬೆನ್ನಟ್ಟಿ ಓಡಿಸಿದ ಗ್ರಾಮಸ್ಥರು
ಸಂತ್ರಸ್ತೆ ಮನೆಗೆ ನುಗ್ಗಿದ ಆರೋಪಿ, ಏಕಾಏಕಿ ಬೆಡ್‌ರೂಮ್‌ಗೆ ಪ್ರವೇಶಿಸಿದ್ದಾನೆ. ನಂತರ ಮಹಿಳೆಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪೊವೈ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ.
ಕೃತ್ಯ ಎಸಗಿ ಆರೋಪಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಸೀರೆ ಧರಿಸಿದ್ದ ಆರೋಪಿಯು ಆಟೋರಿಕ್ಷಾದಲ್ಲಿ ಥಾಣೆಯ ಖರೇಗಾಂವ್‌ನ ಕೊಳೆಗೇರಿಯ ಕಡೆಗೆ ಹೋಗಿದ್ದನ್ನು ಪತ್ತೆಹಚ್ಚಿದರು. ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ಟನ್ ಮಾರ್ಟಿನ್ ಕಾರು ಡಿಕ್ಕಿ, ಯುವತಿ ಸಾವು; ರಾಜ್ಯಸಭಾ ಎಂಪಿ ಪುತ್ರನ ವಿರುದ್ದ ಕೇಸ್ ದಾಖಲು
ಆರೋಪಿಯು ತೃತೀಯಲಿಂಗಿಯಾಗಿ ಅಷ್ಟೇ ಅಲ್ಲ, ಭಿಕ್ಷುಕನಂತೆ ಕೂಡ ನಟಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಜಾಗರೂಕರಾಗಿರುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗಳಿಗೆ ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

