ಹೈದರಾಬಾದ್: ಐಷಾರಾಮಿ ಆಸ್ಟನ್ ಮಾರ್ಟಿನ್(Aston Martin) ಕಾರು ಡಿಕ್ಕಿಯಾಗಿ 26 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ, ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್(Lingamaneni Ramesh) ಅವರ ಪುತ್ರ ಲಿಂಗಮನೇನಿ ಸಂಜುಶ್ (21) ವಿರುದ್ಧ ಅತಿವೇಗ ಮತ್ತು ಅಜಾಗರೂಕ ಚಾಲನೆಯ ಆರೋಪದಡಿ ಪ್ರಕರಣ ದಾಖಲಾಗಿದೆ.
ಇನಾರ್ಬಿಟ್ ಮಾಲ್‌ನಲ್ಲಿರುವ ಲೈಫ್‌ಸ್ಟೈಲ್ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಮುಖಿ, ಆಗಸ್ಟ್ 16ರ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ತಮ್ಮ ಸಹೋದ್ಯೋಗಿ ಪೂಜಾ ಜೊತೆ ಊಟಕ್ಕೆ ತೆರಳಿದ್ದರು.
ಮಾಧಾಪುರ ವ್ಯಾಪ್ತಿಯ ಐಟಿಸಿ ಕೊಹಿನೂರ್ ಬಳಿ ಊಟ ಮುಗಿಸಿ ವಾಪಸ್ ಬರುತ್ತಿದ್ದಾಗ, ಮಾಲ್ ಮುಂಭಾಗ ರಸ್ತೆ ದಾಟುತ್ತಿದ್ದ ಭಾರತಿ ಅವರಿಗೆ ವೇಗವಾಗಿ ಬಂದ ಆಸ್ಟನ್ ಮಾರ್ಟಿನ್ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಭಾರತಿಯನ್ನು ಅದೇ ಕಾರಿನಲ್ಲಿ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ರಾಜ್ಯಸಭಾ ಸಂಸದ ಹಾಗೂ ಉದ್ಯಮಿ ಲಿಂಗಮನೇನಿ ರಮೇಶ್ ಅವರ ಪುತ್ರ 21 ವರ್ಷದ ಸಂಜುಶ್(Lingamaneni Sanjush) ಕಾರು ಚಲಾಯಿಸುತ್ತಿದ್ದರು ಎಂದು ಸೈಬರಾಬಾದ್ ಪೊಲೀಸರು ಗುರುತಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಾಧಾಪುರ ಎಸಿಪಿ ಸಿ.ಎಚ್. ಶ್ರೀಧರ್, “ಆರೋಪಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಅಪರಾಧವು ಜಾಮೀನು ನೀಡಬಹುದಾದ ವ್ಯಾಪ್ತಿಯಲ್ಲಿದ್ದು, ಗರಿಷ್ಠ ಶಿಕ್ಷೆ ಏಳು ವರ್ಷಕ್ಕಿಂತ ಕಡಿಮೆಯಿರುವುದರಿಂದ ಆತನನ್ನು ಸದ್ಯಕ್ಕೆ ಬಂಧಿಸಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) (ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

