ʻಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿʼ ಎನ್ನುವ ಮಾತಿನ ಹಾಗೇ ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಜಗತ್ತಿನಲ್ಲಿರುವ ಎಲ್ಲಾ ಜೀವ ಸಂಕುಲಗಳಿಗೂ ಮಿಗಿಲಾಗಿ ಮಿಡಿಯುವ ಜೀವವದು. ನಮ್ಮೆಲ್ಲರ ಆಸೆಯಾಗಿ, ಆಸರೆಯಾಗಿ, ಆಯಸ್ಸಾಗಿ ಜೊತೆಗಿರುವ ಜೀವನವೂ ಅವಳದ್ದೇ.
ಇಂದು ವಿಶ್ವ ತಾಯಂದಿರ ದಿನಾಚರಣೆ. ನಮೆಲ್ಲರಿಗಾಗಿ ಬದುಕುವ ಆ ಜೀವಕ್ಕೆ ನಮಿಸುವ ದಿನವಿದು. ಆದರೆ ಆ ತಾಯಿಯ ತ್ಯಾಗ, ಪ್ರೀತಿ, ಮಮಕಾರಕ್ಕೆ ಈ ದಿನವೊಂದು ಸಾಕೆ? ಸಾಲದು.. ಅವಳಿಗೆ ಅವಳೇ ಸರಿಸಾಟಿ.

ತಾಯಂದಿರ ದಿನದ ಆಚರಣೆ ಶುರುವಾಗಿದ್ದು ಹೇಗೆ?
20ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ತಾಯಂದಿರ ದಿನ ಆಚರಿಸಲಾಯಿತು. ಅನ್ನಾ ಜಾರ್ವಿಸ್ ಎನ್ನುವ ಮಹಿಳೆ ತನ್ನ ತಾಯಿಯ ಮರಣದ ನಂತರ ಮೊದಲ ಬಾರಿಗೆ ತಾಯಂದಿರ ದಿನವೆಂದು ಆಚರಿಸಿದರು, ಅದಾದ ನಂತರ ಆಗಿನ ಅಧ್ಯಕ್ಷ ವುಡ್ರೋ ವಿಲ್ಸನ್ 1914ರಲ್ಲಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಅಧಿಕೃತವಾಗಿ ಘೋಷಿಸಿದರು.
ಅಲ್ಲಿಂದ ಪ್ರಾರಂಭವಾದ ಈ ದಿನ ಇಂದಿಗೂ ನಮ್ಮಲ್ಲಿ ಒಂದಾಗಿ ಬೆಳೆದುಕೊಂಡು ಬಂದಿದೆ. ಬೆಲೆಕಟ್ಟಲಾಗದ ಪ್ರೀತಿ, ಮಮಕಾರ ನೀಡುವ ಆ ತಾಯಿಗೆ ಈ ಆಚರಣೆ. ಆಗಸದಷ್ಟು ಪ್ರೀತಿ, ತ್ಯಾಗಕ್ಕೆ ಅವಳದ್ದೇ ಹೆಸರು ಎನ್ನುವಂತೆ ಅವಳು ದೇವರ ಪ್ರತಿರೂಪವೇ ಹೌದು.

ಪ್ರತಿಯೊಬ್ಬರ ಜೀವನದಲ್ಲಿಯೂ ಹೆತ್ತ ತಾಯಿಯಿಲ್ಲದೇ ಹೋದರೂ, ಹೊತ್ತ ತಾಯಿಯೊಬ್ಬಳು ಇದ್ದೇ ಇರುತ್ತಾಳೆ. ಇನ್ನೂ ಕೆಲವರ ಜೀವನದಲ್ಲಿ ತಾಯಿಯ ಸ್ವರೂಪ ತಂದೆಯೂ ಆಗಿರಬಹುದು. ಆ ನಿಶ್ಕಲ್ಮಶ ಹೃದಯದ ಭಾವಕ್ಕೆ ಸರಿಸಾಟಿಯೇ ಇಲ್ಲ. ನಮ್ಮೆಲ್ಲರ ಜೀವನದಲ್ಲಿ ಪ್ರತಿ ದಿನವೂ ಅವಳದ್ದೇ ದಿನಚರಿ, ಅಡುಗೆಗೂ ಅವಳ ಪ್ರೀತಿಯೇ ಒಗ್ಗರಣೆ. ಉಸಿರಲ್ಲಿಯೂ ಆಕೆಯದ್ದೇ ಏರಿಳಿತ ಎನ್ನುವ ಹಾಗೇ….. ಜೀವನವೇ ಅವಳದೊಂದು ಸಿಹಿ ಕೊಡುಗೆ.
ಗುರಿಯೇ ಇಲ್ಲದ ಜೀವನದಲ್ಲಿ ಪ್ರತಿ ನಿಲ್ದಾಣವು ಅವಳೇ. ಅವಳ ಪ್ರೀತಿಯೊಂದೇ ನನ್ನ ಗುರಿ. ಇಂದು ನಾ ಕಾಣದ ನೋವು, ನಾ ಕಂಡ ನಲಿವು ಎಲ್ಲವೂ ಅವಳದ್ದೇ ಬಹುದೊಡ್ಡ ಕಾಣಿಕೆ..
ಹೆತ್ತು, ಹೊತ್ತು, ಸಾಕಿ ಸಲುಹಿದ ಎಲ್ಲರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.


