– ಡಿಕೆ ಶಿವಕುಮಾರ್ ಸಿಎಂ ಆದ್ಮೇಲೆ ಈ ರೀತಿಯ ಮನಸ್ಥಿತಿಗಳು ಹೆಚ್ಚಾಗ್ತಿವೆ; ಶಾಸಕರ ಆಕ್ಷೇಪ
ಬೆಂಗಳೂರು: ರಾಜಾಜಿನಗರದ ಶಾಸಕ ಎಸ್. ಸುರೇಶ್ ಕುಮಾರ್ (Suresh Kumar) ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಪಾಲಿಕೆ ವತಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಬಾಹಿರವಾಗಿ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟಿದ್ದಾರೆ. 300 ಕೋಟಿ ರೂಪಾಯಿ ಟೆಂಡರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು (Congress Workers) ಪ್ರತಿಭಟನೆ ನಡೆಸಿದ್ದಾರೆ.
ಶಾಸಕರು ರಾಜಾಜಿನಗರದ (Rajajinagara) ಆರ್‌ಟಿಒ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ NSUI ಯೂತ್ ಕಾಂಗ್ರೆಸ್‌ನ ಕಾರ್ಯಕರ್ತರು, ಶಾಸಕರಿಗೆ ಮುತ್ತಿಗೆಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಭಾರೀ ಹೈಡ್ರಾಮಾವೇ ನಡೆದಿದೆ.

ಆರ್‌ಟಿಒ ಮುಂಭಾಗ ಪೊಲೀಸ್ ಬಿಗಿ ಬಂದೋಬಸ್ತ್
ʻಕೈʼ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರ್‌ಟಿಒ ರಸ್ತೆ ಕ್ಲೋಸ್ ಮಾಡಿದ್ದಾರೆ. ರಸ್ತೆಯ ಎರಡು ಬದಿಗೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿಸಿದ್ದಾರೆ. ಜೊತೆಗೆ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದ ಕಚೇರಿ ಮುಂಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.
ಶಾಸಕರ ಮುತ್ತಿಗೆಗೆ ಯತ್ನ
ಇನ್ನೂ ಶಾಸಕ ಸುರೇಶ್ ಕುಮಾರ್ ವಿರುದ್ಧ ಧಿಕ್ಕಾರ ಕೂಗುತ್ತಲೇ ಆರ್‌ಟಿಒ ಕಚೇರಿ ಬಳಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಆರ್‌ಟಿಒ ಕಚೇರಿ ಒಳನುಗ್ಗಲು ಯತ್ನಿಸಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಮುಖಾಮುಖಿಯಾಗಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು ಎರಡೂ ಪಕ್ಷದ ಕಾರ್ಯಕರ್ತರನ್ನ ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗದುಕೊಂಡಿದ್ದಾರೆ.
ಜನಸ್ಪಂದನೆ ಕಾರ್ಯಕ್ರಮ ಹಾಳು ಮಾಡುವ ಹುನ್ನಾರ
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಸುರೇಶ್ ಕುಮಾರ್, ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ವಿಚಾರಣೆಗೆ ಕರೆದ್ರೆ ಹೋಗ್ತೇನೆ. ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಜನಸ್ಪಂದನೆ ಕಾರ್ಯಕ್ರಮವನ್ನ ಹಾಳು ಮಾಡಲು ಬಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆದ್ಮೇಲೆ ಈ ರೀತಿಯ ಮನಸ್ಥಿತಿಗಳು ಹೆಚ್ಚಾಗ್ತಿವೆ. ಇದು ಸರಿಯಲ್ಲ, ಕಾಂಗ್ರೆಸ್ ಪಕ್ಷಕ್ಕೆ ಇದು ಒಳ್ಳೆಯದಲ್ಲ ಎಂದು ಹೇಳಲು ಬಯಸುತ್ತೇನೆ. ನನ್ನ ಸೊಸೆ, ಮಕ್ಕಳಿಗೆ ನನ್ನ ಸಂಸ್ಥೆಯಿಂದ ಸಾಲ ಕೊಡಿಸುವ ಕೆಲಸ ಮಾಡಿಲ್ಲ. ಯಾರಿಂದ, ಯಾರ ಪ್ರೇರಣೆಯಿಂದ ದೂರು ನೀಡಲಾಗಿದೆ. ʻಬಿಲ್ʼವಿದ್ಯೆಯಲ್ಲಿ ಪರಿಣಿತ ಹೊಂದಿದ ವ್ಯಕ್ತಿಯ ಪರವಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಕುಟುಕಿದ್ದಾರೆ.
