– ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಇಂದೇ ಪತನ ಸಾಧ್ಯತೆ
– ಫೋನ್‌ಕಾಲ್‌ನಲ್ಲಿ ಸಿಎಂಗೆ ನಾಗೇಂದ್ರ ಹೇಳಿದ್ದೇನು?
ಬೆಂಗಳೂರು: ಬಿಜೆಪಿ ಬಳ್ಳಾರಿ ಪಾದಯಾತ್ರೆಗೂ (BJP Ballari Padayatra) ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸಚಿವ ನಾಗೇಂದ್ರ ಅವರು ಒಲವು ತೋರಿದ್ದಾರೆ ಅನ್ನೋ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರೊಂದಿಗೆ ದೂರವಾಣಿ ಕರೆ ಮೂಲಕ ರಾಜೀನಾಮೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ವಿಪಕ್ಷಗಳ ನಿರಂತರ ಹೋರಾಟ, ಬಿಜೆಪಿ ಘೋಷಿಸಿರುವ ಪಾದಯಾತ್ರೆ ಹಾಗೂ ರಾಜ್ಯಪಾಲರ ಮುಂದೆ ಇರುವ ಪ್ರಾಸಿಕ್ಯೂಷನ್ ಅನುಮತಿ ವಿಚಾರದಿಂದಾಗಿ ಸಚಿವ ನಾಗೇಂದ್ರ (B Nagendra) ಅವರಿಗೆ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಮತ್ತಷ್ಟು ಮುಜುಗರ ಉಂಟಾಗುವ ಆತಂಕ ಎದುರಾಗಿದೆ. ಹೀಗಾಗಿ ಖುದ್ದಾಗಿ ರಾಜೀನಾಮೆ ನೀಡಲಿ ಮುಂದಾಗಿದ್ದಾರಂತೆ.

ʻ‘ನಿಮಗೆ ಮುಜುಗರ ಆಗೋದು ಬೇಡ, ರಾಜೀನಾಮೆ ಕೊಡ್ತೇನೆʼʼ
ಸಿಎಂಗೆ ಕರೆ ಮಾಡಿ ರಾಜೀನಾಮೆ ವಿಚಾರ ಪ್ರಸ್ತಾಪಿಸಿರುವ ಸಚಿವ ನಾಗೇಂದ್ರ ಅವರು, ʻʻಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗುವುದು ಬೇಡ. ನಾನು ರಾಜೀನಾಮೆ ಕೊಡುತ್ತೇನೆʼ ಎಂದು ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆʼʼ ಎಂದು ಹೇಳಲಾಗ್ತಿದೆ.
ಮುಂದುವರಿದು.. ʻʻನಾನು ದಲಿತ ಎಂಬ ಕಾರಣಕ್ಕೆ ನನ್ನನ್ನ ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಬೇಕಾದರೆ ಬೇರೆಯವರಿಗೆ ಅವಕಾಶ ಕೊಡಿʼ ಎಂದು ನಾಗೇಂದ್ರ ಅವರು ಸಿಎಂ ಬಳಿ ಹೇಳಿಕೊಂಡಿದ್ದಾರಂತೆ. ಆದರೆ, ನಾಗೇಂದ್ರ ಅವರನ್ನು ಸಮಾಧಾನಪಡಿಸಿರುವ ಸಿಎಂ ಡಿಕೆಶಿ ʻಸದ್ಯಕ್ಕೆ ಸುಮ್ಮನಿರು. ನಾನು ಹೈಕಮಾಂಡ್ ಜೊತೆ ಮಾತನಾಡುತ್ತೇನೆʼʼ ನೀಡಿದ್ದಾರಂತೆ.

ವಿಪಕ್ಷಗಳ ಹೋರಾಟದಿಂದ ನಾಗೇಂದ್ರಗೆ ಆತಂಕ?
ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಸದನದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸದನದ ಕಲಾಪಕ್ಕೂ ಅಡ್ಡಿಯುಂಟಾಗಿತ್ತು. ಇದೀಗ ಬಿಜೆಪಿ ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗಿದ್ದು, ಪಾದಯಾತ್ರೆ ಘೋಷಿಸಿರುವುದು ನಾಗೇಂದ್ರ ಅವರಿಗೆ ಮತ್ತಷ್ಟು ರಾಜಕೀಯ ಒತ್ತಡ ತಂದಿದೆ ಎನ್ನಲಾಗಿದೆ.
ರಾಯಚೂರಿನಿಂದ ಬಳ್ಳಾರಿ ವರೆಗೆ ಬಿಜೆಪಿ ಪಾದಯಾತ್ರೆ
ವಾಲ್ಮೀನಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಬಿಜೆಪಿ ರಾಯಚೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದೆ. ಈ ಹೋರಾಟದ ಮೂಲಕ ಪ್ರಕರಣವನ್ನ ಮತ್ತಷ್ಟು ರಾಜಕೀಯವಾಗಿ ಪ್ರಬಲವಾಗಿ ಬಿಂಬಿಸುವ ಸಾಧ್ಯತೆ ಇದೆ. ಇದರಿಂದ ತಮ್ಮ ವೈಯಕ್ತಿಕ ವರ್ಚಸ್ಸಿನ ಜೊತೆಗೆ ಪಕ್ಷಕ್ಕೂ ಹಾಗೂ ಸರ್ಕಾರಕ್ಕೂ ಹಿನ್ನಡೆಯಾಗಬಹುದು ಎಂಬ ಆತಂಕ ಸಚಿವ ನಾಗೇಂದ್ರ ಅವರಲ್ಲಿದೆ ಆದ್ದರಿಂದ ನಾಗೇಂದ್ರ ಅವರೇ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯಪಾಲರ ಮುಂದಿರುವ ಪ್ರಾಸಿಕ್ಯೂಷನ್ ಅನುಮತಿ ಫೈಲ್
ಇನ್ನೊಂದೆಡೆ, ಸಚಿವ ನಾಗೇಂದ್ರ ವಿರುದ್ಧ ಸಿಬಿಐ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂಬಂಧಿತ ಫೈಲ್ ರಾಜ್ಯಪಾಲರ ಮುಂದಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಬಹುದು ಎಂಬ ಆತಂಕವೂ ನಾಗೇಂದ್ರ ಅವರಿಗೆ ಇದೆ ಎನ್ನಲಾಗಿದೆ.
ಒಟ್ಟಿನಲ್ಲಿ ನಾಗೇಂದ್ರ ಅವರು ನಿಜವಾಗಿಯೂ ರಾಜೀನಾಮೆ ನೀಡುತ್ತಾರಾ? ಅಥವಾ ಸಿಎಂ ಹಾಗೂ ಹೈಕಮಾಂಡ್ ಮಧ್ಯಪ್ರವೇಶದಿಂದ ಈ ಬಿಕ್ಕಟ್ಟು ಬಗೆಹರಿಯುತ್ತದೆಯೇ? ಎಂಬುದು ಸದ್ಯದ ಕುತೂಹಲ.
