Districts
ಹಣ್ಣಿನ ತೋಟದ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳ ಸಾವು- ಶ್ರೀರಂಗಪಟ್ಟಣದಲ್ಲಿ ಮನಕಲಕುವ ಘಟನೆ

ಮಂಡ್ಯ: ಹಣ್ಣಿನ ತೋಟಗಳ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ, ಗಂಜಾಂ ಬಳಿ ನಡೆದಿದೆ.
ಟಿಪ್ಪು ಸುಲ್ತಾನ್ ಸಮಾಧಿ ಸ್ಥಳ ಗುಂಬಸ್‍ಗೆ ಕೂಗಳತೆ ದೂರದಲ್ಲಿರುವ ತೋಟದಲ್ಲಿ ಅಂದಾನಯ್ಯ ಎಂಬವರು ಸೀಬೆ ಮತ್ತು ಪನ್ನೇರಳೆ ಬೆಳೆ ಬೆಳೆದಿದ್ದಾರೆ. ಬೆಳೆಗೆ ಪ್ರಾಣಿ ಪಕ್ಷಿಗಳಿಂದ ತೊಂದರೆ ಆಗದಂತೆ ಹಣ್ಣಿನ ತೋಟದ ಸುತ್ತ ಬಲೆ ಕಟ್ಟಿದ್ದಾರೆ. ಇದೀಗ ತೋಟದ ಸುತ್ತ ಹರಡಿರುವ ಬಲೆಗೆ ಪಕ್ಷಿಗಳು ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ.
ಕೋಗಿಲೆ, ಬಿಳಿಚುಕ್ಕೆ ಗೂಬೆ, ಕಿಂಗ್ ಫಿಷರ್, ಹಸಿರು ಗಿಳಿ, ಮರಕುಟಿಕ, ಸನ್ ಬರ್ಡ್, ಬುಲ್ ಬುಲ್ ಇನ್ನಿತರ ಜಾತಿಯ ಪಕ್ಷಿಗಳ ದೇಹಗಳು ಬಲೆಗೆ ಸಿಲುಕಿ ನೇತಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಸುಮಾರು 2 ಎಕರೆ ವಿಸ್ತೀರ್ಣದ ತೋಟದಲ್ಲಿ ಆರೇಳು ತಿಂಗಳುಗಳಿಂದಲೂ ಪಕ್ಷಿಗಳು ಬಲೆಗೆ ಸಿಲುಕಿರುವ ಕುರುಹುಗಳಿವೆ. ಪಕ್ಷಿಗಳ ಮೂಳೆ, ರೆಕ್ಕೆ, ಪುಕ್ಕಗಳ ಅವಶೇಷಗಳು ಅಲ್ಲಲ್ಲಿ ಬಿದ್ದಿವೆ.
ಆಹಾರ ಅರಸಿಕೊಂಡು ಬಂದ ಪಕ್ಷಿಗಳು ಗಟ್ಟಿಯಾದ ಬಲೆಗೆ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೆ ಪ್ರಾಣ ಕಳೆದುಕೊಂಡಿವೆ. ಪನ್ನೇರಳೆ ಮರಕ್ಕೆ ಕೋತಿಗಳ ಹಾವಳಿ ನಿಯಂತ್ರಿಸಲು ಬಲೆ ಹಾಕಲಾಗಿತ್ತು. ಬಲೆಗೆ ಪಕ್ಷಿಗಳು ಸಿಲುಕಿ ಮೃತ ಪಟ್ಟಿವೆ. ಇದು ಉದ್ದೇಶಪೂರ್ವಕವಲ್ಲ ಅಂತಿದ್ದಾರೆ ತೋಟದ ಮಾಲೀಕ ಅಂದಾನಯ್ಯ.
