ರಾಯಚೂರು: ಮಣ್ಣೆತ್ತಿನ ಅಮವಾಸ್ಯೆ (Mannettina Amavasye) ಹಿನ್ನೆಲೆ ಮಣ್ಣಿನ ಎತ್ತುಗಳ ವ್ಯಾಪಾರ ಜೋರಾಗಿದೆ. ಉತ್ತರ ಕರ್ನಾಟಕ (North Karnataka) ಭಾಗದ ಗ್ರಾಮೀಣ ಸೊಗಡಿನ ಹಬ್ಬಗಳಲ್ಲಿ ಒಂದಾದ ಮಣ್ಣೆತ್ತಿನ ಅಮವಾಸ್ಯೆಯನ್ನ ರಾಯಚೂರಿನಲ್ಲಿ (Raichuru) ಜನ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡುವ ಎತ್ತುಗಳನ್ನ ಮಣ್ಣಿನಿಂದ ತಯಾರಿಸಿ ದೇವರ ಜಗಲಿಯಲ್ಲಿಟ್ಟು ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸುತ್ತಾರೆ. ಈ ಬಾರಿ ಮಣ್ಣೆತ್ತಿನ ವ್ಯಾಪಾರ ಜೋರಾಗಿದ್ದು, ಜೋಡೆತ್ತಿನ ಬೆಲೆ ಕೂಡ ಹೆಚ್ಚಾಗಿದೆ. 80 ರೂ.ಯಿಂದ 100 ರೂ.ವರೆಗೆ ಮಣ್ಣಿನ ಜೋಡೆತ್ತುಗಳ ಮಾರಾಟ ನಡೆದಿದೆ. ಇದನ್ನೂ ಓದಿ: ಆಟವಾಡ್ತಿದ್ದಾಗ ಗ್ರಿಲ್‌ನಿಂದ ಆಯತಪ್ಪಿ ಕೆಳಗೆ ಬಿದ್ದ 4 ವರ್ಷದ ಮಗು – ಸ್ಥಿತಿ ಗಂಭೀರ
ಈ ಮೊದಲು ತಯಾರಿಸಿಟ್ಟ ಎತ್ತುಗಳು ಈಗಾಗಲೇ ಖಾಲಿಯಾಗಿರುವುದರಿಂದ ವ್ಯಾಪಾರಿಗಳು ಸ್ಥಳದಲ್ಲೇ ಎತ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ನಿನ್ನೆಯಿಂದ ಜನ ಮಣ್ಣೆತ್ತುಗಳನ್ನ ಖರೀದಿ ಮಾಡುತ್ತಿದ್ದು, ಇಂದು ಪೂಜೆ ಸಲ್ಲಿಸುತ್ತಿದ್ದಾರೆ. ಅಮಾವಾಸ್ಯೆ ಹಿನ್ನೆಲೆ ಬಸವಣ್ಣನಿಗೆ ಕರಿಗಡುಬು, ಪಾಯಸ ಸೇರಿದಂತೆ ವಿವಿಧ ಖಾದ್ಯಗಳ ನೈವೇದ್ಯ ಹಿಡಿಯಲಾಗುತ್ತದೆ.
ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಒಂದೆಡೆಯಿದ್ರೆ ಈ ಬಾರಿ ಇನ್ನೂ ಬಾರದ ಮಳೆ ಮುಂದೆಯಾದ್ರೂ ಉತ್ತಮವಾಗಿ ಸುರಿಯಲಿ ಅಂತ ಜನ ಪ್ರಾರ್ಥಿಸುತ್ತಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ಮಳೆ ಬಂದಿದ್ದರೂ ಕೂಡ ಈಗ ವರುಣನ ದರ್ಶನ ಅಪರೂಪವಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮಳೆ ಬರಲಿ ಅಂತ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ.ಇದನ್ನೂ ಓದಿ: ಭೀಮನ ಮೇಲೆ ಕಲ್ಲು ತೂರಾಟ – ಅಸ್ಸಾಂ ಮೂಲದ ಪುಂಡನ ವಿರುದ್ಧ ಸ್ಥಳೀಯರು ಗರಂ
