Districts
ಅಜ್ಜಿಯ ಅಸ್ಥಿ ಬಿಡಲು ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮೊಮ್ಮಗ

ಮಂಡ್ಯ: ಅಜ್ಜಿಯ ಅಸ್ಥಿ ವಿಸರ್ಜನೆ ವೇಳೆ ಯುವಕನೊಬ್ಬ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಬಳಿ ನಡೆದಿದೆ.
ಬೆಂಗಳೂರಿನ ಗವಿಪುರಂ ನಿವಾಸಿ 31 ವರ್ಷದ ಎನ್.ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋದ ಯುವಕನಾಗಿದ್ದಾನೆ. ಶ್ರೀಪ್ರಸಾದ್ನ ಅಜ್ಜಿ ಚಂದ್ರಮತಿ ಮೂರು ದಿನದ ಹಿಂದೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಅಸ್ಥಿ ವಿಸರ್ಜನೆಗಾಗಿ ಕುಟುಂಬದ ಸದಸ್ಯರೆಲ್ಲ ಶ್ರೀರಂಗಪಟ್ಟಣ ಗೋಸಾಯಿ ಘಾಟ್ಗೆ ಬಂದಿದ್ದರು.
ಈ ವೇಳೆ ವೈದಿಕರ ಮಾರ್ಗದರ್ಶನದಂತೆ ವಿಧಿ ವಿಧಾನ ಮುಗಿಸಿ, ಅಂತಿಮವಾಗಿ ಅಸ್ಥಿ ವಿಸರ್ಜನೆಗಾಗಿ ಶ್ರೀಪ್ರಸಾದ್ ಹಾಗೂ ಆತನ ಭಾವ ಮಯೂರ್ ಕಾವೇರಿ ನದಿಗೆ ಇಳಿದಿದ್ದರು. ಅಸ್ಥಿ ಬಿಟ್ಟ ಬಳಿಕ ನೀರಿನಲ್ಲಿ ಮುಳುಗಲು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮೊದಲೇ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ. ಈ ವೇಳೆ ಮಯೂರ್ ಅವರನ್ನು ಸ್ಥಳೀಯರು ದಡ ಸೇರಿಸಿದ್ದಾರೆ. ಆದರೆ ಶ್ರೀಪ್ರಸಾದ್ ಕುಟುಂಬಸ್ಥರ ಕಣ್ಣೆದುರೇ ನೀರಿನಲ್ಲಿ ಮುಳುಗಿದ್ದಾರೆ.
ನದಿ ಅಂಚಿನ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್ಗಳಲ್ಲಿ ವೈದಿಕರು ಅಂತಿಮ ವಿಧಿ ವಿಧಾನ ನಡೆಸುತ್ತಿದ್ದರು. ನದಿ ಆಳವಿದ್ದರೂ ಹಣದ ಆಸೆಗಾಗಿ ಹೊರ ಜಿಲ್ಲೆಗಳಿಂದ ಬರುವ ಜನರನ್ನು ಪುಸಲಾಯಿಸಿ ಅಪಾಯವನ್ನೂ ಲೆಕ್ಕಿಸದೇ ಅವರಿಂದ ಅಸ್ಥಿ ವಿಸರ್ಜನೆ ಮಾಡಿಸುತ್ತಿದ್ದರು. ಅದರಿಂದಲೇ ಈ ದುರ್ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೂರೇ ದಿನದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
