ಬಾಗಲಕೋಟೆ: ನಗರದ ನವನಗರ ಸೆಕ್ಟರ್ 31 ರಲ್ಲಿರುವ ಪ್ರಸಿದ್ಧ ‘ಓಂ ಜ್ಯೂವೆಲ್ಲರ್ಸ್’ ಅಂಗಡಿಯಲ್ಲಿ ಮಧ್ಯರಾತ್ರಿ ಸಿನಿಮೀಯ ಮಾದರಿಯಲ್ಲಿ ಕನ್ನ ಕೊರೆದಿರುವ ಖದೀಮರು, ಸುಮಾರು 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ದಿಗಂಬರ್ ಕುರಡೇಕಾರ್ ಅವರಿಗೆ ಸೇರಿದ ಈ ಜ್ಯೂವೆಲ್ಲರಿ ಅಂಗಡಿಯನ್ನು ಟಾರ್ಗೆಟ್ ಮಾಡಿದ್ದ ಇಬ್ಬರು ಕಳ್ಳರು, ಕಾರಿನಲ್ಲಿ ಬಂದು ಅಂಗಡಿಯ ಮುಂಭಾಗ ನಿಲ್ಲಿಸಿದ್ದಾರೆ. ನಂತರ ಗ್ಯಾಸ್ ಕಟ್ಟರ್ ಬಳಸಿ ಶಟರ್ ಮತ್ತು ಮುಂಬಾಗಿಲಿನ ಬೀಗಗಳನ್ನು ಕತ್ತರಿಸಿ ಕ್ಷಣಾರ್ಧದಲ್ಲಿ ಅಂಗಡಿಯೊಳಗೆ ನುಗ್ಗಿದ್ದಾರೆ.
ಅಂಗಡಿಯಲ್ಲಿದ್ದ ಸುಮಾರು 200 ಕೆಜಿ ತೂಕದ ಬೆಳ್ಳಿ ಸಾಮಗ್ರಿಗಳು ಹಾಗೂ ಅಪಾರ ಪ್ರಮಾಣದ ಚಿನ್ನದ ಒಡವೆಗಳನ್ನು ಗೋಣಿಚೀಲಗಳಿಗೆ ತುಂಬಿಕೊಂಡು ವಾಹನದಲ್ಲಿ ಪರಾರಿಯಾಗಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕಳುವಾದ ವಸ್ತುಗಳ ಮೌಲ್ಯ ಸುಮಾರು 2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಖದೀಮರ ಈ ಇಡೀ ಕೃತ್ಯವು ಅಂಗಡಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆಯೇ ನವನಗರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಖದೀಮರ ಪತ್ತೆಗಾಗಿ ಬಲೆ ಬೀಸಿದ್ದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕಳುವಾಗಿರುವ ಚಿನ್ನಾಭರಣಗಳ ನಿಖರ ತೂಕ ಹಾಗೂ ಒಟ್ಟು ನಷ್ಟದ ಮೊತ್ತವನ್ನು ಲೆಕ್ಕಹಾಕಲಾಗುತ್ತಿದೆ ಎಂದು ಅಂಗಡಿ ಮಾಲೀಕ ದಿಗಂಬರ್ ಕುರಡೇಕಾರ್ ತಿಳಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಇಂತಹ ಭಾರಿ ದರೋಡೆ ನಡೆದಿರುವುದು ಸ್ಥಳೀಯ ವ್ಯಾಪಾರಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ.
