ಬೆಂಗಳೂರು: ಅಜ್ಞಾತವಾಗಿದ್ದು, ಎಲ್ಲೆಲ್ಲೋ ಚೆಲ್ಲಾಪಿಲ್ಲಿಯಾಗಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಬೆಳಕಿಗೆ ತಂದ ಕೀರ್ತಿಯು ಫ.ಗು.ಹಳಕಟ್ಟಿ (Fa.Gu.Halakatti) ಅವರಿಗೆ ಸಲ್ಲುತ್ತದೆ. ಅವರಿಲ್ಲದೆ ಹೋಗಿದ್ದರೆ ಶರಣ ಸಂಸ್ಕೃತಿ, ಲಿಂಗಾಯತ ಧರ್ಮ, ಬಸವಾದಿ ಶರಣರು ಎಲ್ಲವೂ ಕಳೆದು ಹೋಗುತ್ತಿತ್ತು ಎಂದು ಸಚಿವ ಎಂ.ಬಿ.ಪಾಟೀಲ್ (M.B.Patil) ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ ಮತ್ತು ವಿಜಯಪುರದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಜತೆಗೂಡಿ ಇಲ್ಲಿನ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಹಳಕಟ್ಟಿ ಜನ್ಮದಿನ ಮತ್ತು ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದನ್ನೂ ಓದಿ: ಕಲ್ಲು ಕ್ವಾರೆ ದುರಂತ – ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ: ಹೆಚ್‌ಡಿಕೆ
ಧಾರವಾಡ ಸೀಮೆಯ ಹಳಕಟ್ಟಿಯವರು ವಿಜಯಪುರವನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು, ಅಗಾಧ ಕೆಲಸ ಮಾಡಿದರು. ಅವರಿಂದಾಗಿ ನೂರಾರು ವಚನಕಾರರು ನಾಡಿಗೆ ಗೊತ್ತಾದರು. ಇದಲ್ಲದೆ ಅವರು ಮುದ್ರಣಾಲಯ ಸ್ಥಾಪಿಸಿದ ಸಾಹಸಿಗಳೂ ಆಗಿದ್ದರು ಎಂದು ಸಚಿವರು ಬಣ್ಣಿಸಿದ್ದಾರೆ.

ಸರ್ಕಾರವು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸುತ್ತಿದೆ. ಇಲ್ಲಿ ಏನೇನಾಗಬೇಕು ಎಂಬ ಬಗ್ಗೆ ಶರಣ ಸಾಹಿತ್ಯ ಪರಿಷತ್ತು ಸಲಹೆ ನೀಡಿದೆ. ಇವುಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ಹಳಕಟ್ಟಿ ಅವರಿಂದಾಗಿ ವಿಶ್ವಗುರು ಬಸವಣ್ಣ ಮುಂತಾದವರು ಗೊತ್ತಾದರು. ವಚನ ಸಂಸ್ಕೃತಿ ಇಂದು ಹೆಮ್ಮರವಾಗಿ ಬೆಳೆಯಲು ಅವರೇ ಮೂಲಕಾರಣ ಎಂದು ನೆನೆದಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ – ಕೋಮು ಗಲಭೆ ʼಕೇಸ್ ವಾಪಸಿʼಗೆ ಹೈಕೋರ್ಟ್ ತಡೆ
ವಚನ ಸಾಹಿತ್ಯವನ್ನು ಸಂಗ್ರಹಿಸುವ ಕೆಲಸವನ್ನು ಹಳಕಟ್ಟಿ ಮಾಡಿದರೆ, ಅದನ್ನು ಲೋಕಕ್ಕೆ ಪಸರಿಸುವ ಕೆಲಸವನ್ನು ಎಂ.ಬಿ.ಪಾಟೀಲ ನೇತೃತ್ವದ ಬಿಎಲ್‌ಡಿಇ ಸಂಸ್ಥೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿ.ಸೋಮಶೇಖರ್, ಅಖಿಲ ಭಾರತ ಮುದ್ರಣಕಾರರ ಸಂಘದ ಅಧ್ಯಕ್ಷ ಸಿ.ಆರ್.ಜನಾರ್ದನ ಮಾತನಾಡಿದರು. ಮಾಜಿ ಉಪ ಮೇಯರ್ ಪುಟ್ಟರಾಜು, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ, ಮುದ್ರಣಕಾರರ ಸಂಘದ ಪದಾಧಿಕಾರಿಗಳಾದ ಅಶೋಕ್ ಕುಮಾರ್, ಸ್ವ್ಯಾನ್ ಕೃಷ್ಣಮೂರ್ತಿ, ಮರಳವಾಡಿ ಶಿವಶಂಕರ್, ಮಲ್ಲಿಕಾರ್ಜುನ, ಫಾಲನೇತ್ರ, ರಾಜಶೇಖರ ಮುಂತಾದವರು ಉಪಸ್ಥಿತರಿದ್ದರು.
