ಬಳ್ಳಾರಿ: ಜಿಲ್ಲೆಯಾದ್ಯಂತ ವಿವಿಧ ಪ್ರಮುಖ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲದಲ್ಲಿ ಮಿಂಚಿನ ತಪಾಸಣೆ ಕೈಗೊಂಡಿದ್ದು, ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು ಹಾಗೂ ಬಳ್ಳಾರಿಯ ಲೋಕಾಯುಕ್ತ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಇಂದು ಬೆಳಗ್ಗೆಯಿಂದಲೇ ಜಿಲ್ಲೆಯ ಪ್ರಮುಖ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿವೆ. ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ – RTO), ಭೂದಾಖಲೆಗಳ ಇಲಾಖೆ (ADLR) ಸೇರಿದಂತೆ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಹಲವು ಇಲಾಖೆಗಳಲ್ಲಿ ಕಡತಗಳನ್ನು ಪರಿಶೀಲಿಸಿದೆ.
ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳು ಮತ್ತು ಕಡತಗಳನ್ನು ವಿನಾಕಾರಣ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಲಂಚಕ್ಕಾಗಿ ಕಿರುಕುಳ, ಕೆಲಸ ವಿಳಂಬ ಹಾಗೂ ಮಧ್ಯವರ್ತಿಗಳ ಹಾವಳಿ ಕುರಿತು ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಈ ಶೋಧ ನಡೆಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ, ಸಮಯಪಾಲನೆ ಹಾಗೂ ಕಚೇರಿಗಳ ಕಾರ್ಯವೈಖರಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ಕೇವಲ ಜಿಲ್ಲಾ ಕೇಂದ್ರವಷ್ಟೇ ಅಲ್ಲದೆ, ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಕಚೇರಿಗಳಿಗೂ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಭೇಟಿ ನೀಡಿ ಕಡತಗಳನ್ನು ಪರಿಶೀಲಿಸುತ್ತಿವೆ. ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದು, ದಾಖಲೆಗಳ ಸಮಗ್ರ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ದಿಢೀರ್ ನಡೆದ ಈ ಕಾರ್ಯಾಚರಣೆಯಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದೆ.
