ಹಾಸನ: ಸಕಲೇಶಪುರ(Sakleshpur) ತಾಲ್ಲೂಕಿನ ಎಡಕುಮಾರಿ ಹಾಗೂ ಶಿರವಾಗಿಲು ನಡುವೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರೈಲ್ವೆ(Train) ಹಳಿ ಮೇಲೆ ಸಂಭವಿಸಿದ್ದ ಭೀಕರ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ, ರೈಲ್ವೆ ಇಲಾಖೆ ಯಶಸ್ವಿಯಾಗಿ ಮಣ್ಣು ತೆರವುಗೊಳಿಸಿದ್ದು ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಅಧಿಕೃತವಾಗಿ ಪುನರಾರಂಭಿಸಿದೆ.
ಶನಿವಾರ ರಾತ್ರಿ ಭಾರೀ ಮಳೆಯಿಂದಾಗಿ ಬೆಟ್ಟದ ಮಣ್ಣು ಮತ್ತು ಬಂಡೆಕಲ್ಲುಗಳು(Landslide) ರೈಲ್ವೆ ಹಳಿಯ ಮೇಲೆ ಕುಸಿದುಬಿದ್ದಿದ್ದವು. ಇದರಿಂದಾಗಿ ಬೆಂಗಳೂರಿನಿಂದ (Bengaluru) ಕರಾವಳಿ ಮತ್ತು ಕೇರಳ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆಯ ತಾಂತ್ರಿಕ ತಂಡ ಮತ್ತು ಕಾರ್ಮಿಕರು, ಪ್ರತಿಕೂಲ ವಾತಾವರಣದ ನಡುವೆಯೂ ಸತತ ಮೂರು ದಿನಗಳ ಕಾಲ ಹಗಲಿರುಳು ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು. ಪ್ರಸ್ತುತ ಹಳಿಯ ಮೇಲಿದ್ದ ರಾಶಿಗಟ್ಟಲೆ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಮಾರ್ಗವನ್ನು ಸಂಚಾರಕ್ಕೆ ಯೋಗ್ಯಗೊಳಿಸಲಾಗಿದೆ. ಇದನ್ನೂ ಓದಿ: ಸಕಲೇಶಪುರದಲ್ಲಿ ಮಳೆ ಅಬ್ಬರಕ್ಕೆ ಹಳಿ ಮೇಲೆ ಗುಡ್ಡ ಕುಸಿತ – ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ
ಸ್ಥಿತಿಗತಿ ಸಂಪೂರ್ಣವಾಗಿ ಹಾದಿಗೆ ಬಂದ ನಂತರ ಸಾಮಾನ್ಯ ವೇಳಾಪಟ್ಟಿಯಂತೆ (Regular Timetable) ರೈಲುಗಳ ಸಂಚಾರವನ್ನು ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಎಂದು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
