ಶ್ರೀನಗರ: ಪರಿಸರ ಕಾರ್ಯಕರ್ತ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ (Sonam Wangchuk) ಸ್ಥಾಪಿಸಿರುವ ಲಡಾಖ್ನ ಡೆಸರ್ಟ್ ಫ್ಲವರ್ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಲಡಾಖ್ ಆಡಳಿತ ಸೂಚಿಸಿದೆ.
ಶಾಲೆಗೆ ಸಂಬಂಧಿಸಿದ ಭೂಮಿ ಹಂಚಿಕೆ ರದ್ದತಿ ಪ್ರಕರಣ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಸೋನಮ್ ವಾಂಗ್ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (HIAL) ಸಂಸ್ಥೆಗೆ ಈ ಸೂಚನೆ ನೀಡಲಾಗಿದೆ. ಲೇಹ್ನ ಫಿಯಾಂಗ್ನಲ್ಲಿರುವ ಡೆಸರ್ಟ್ ಫ್ಲವರ್ ಶಾಲೆಯ ತರಗತಿಗಳು ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆಡಳಿತ ತಿಳಿಸಿದೆ.
ಲೇಹ್ ತಹಶೀಲ್ದಾರ್ ಕಚೇರಿಯು ನವೆಂಬರ್ 1ರಂದು HIAL ಸಹ-ಸಂಸ್ಥಾಪಕಿ ಹಾಗೂ ಸಿಇಒ (ಸೋನಮ್ ವಾಂಗ್ಚುಕ್ ಅವರ ಪತ್ನಿ) ಗೀತಾಂಜಲಿ ಜೆ. ಅಂಗ್ಮೋ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಫಿಯಾಂಗ್ನಲ್ಲಿರುವ ಡೆಸರ್ಟ್ ಫ್ಲವರ್ ಶಾಲೆಯಲ್ಲಿ ಅಗತ್ಯ ಅನುಮತಿ, ಒಪ್ಪಿಗೆ ಅಥವಾ ಅನುಮೋದನೆಗಳನ್ನು ಪಡೆಯದೆ ತರಗತಿಗಳು ಮತ್ತು ಇತರ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂಬ ಮಾಹಿತಿ ಆಡಳಿತಕ್ಕೆ ಲಭ್ಯವಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಶಾಲೆಯ ವ್ಯವಸ್ಥಾಪಕ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲು ನಿರಾಕ್ಷೇಪಣಾ ಪ್ರಮಾಣಪತ್ರ (NOC) ಕೋರಿ ಅಂಗ್ಮೋ ಅವರು ಸೆಪ್ಟೆಂಬರ್ 22ರಂದು ಸಲ್ಲಿಸಿದ್ದ ಪತ್ರವನ್ನೂ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಈ ಶಾಲೆಯು HIAL ಸಂಸ್ಥೆಯ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ.
1,076 ಕನಾಲ್ ಭೂಮಿ ಹಂಚಿಕೆ ರದ್ದತಿ ಪ್ರಕರಣ
HIAL ಸಂಸ್ಥೆಗೆ ಈ ಹಿಂದೆ ನೀಡಲಾಗಿದ್ದ 1,076 ಕನಾಲ್ಗಳ (ಸುಮಾರು 134.5 ಎಕರೆ) ಹಾಗೂ ಒಂದು ಮಾರ್ಲಾ ಭೂಮಿಯ ಹಂಚಿಕೆಯನ್ನು ಆಡಳಿತ ಮಂಡಳಿ ರದ್ದುಗೊಳಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಸಂಬಂಧಿತ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.
ಈ ಪ್ರಕರಣ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಶಾಲೆಯ ಕಾರ್ಯನಿರ್ವಹಣೆ ಅಥವಾ ಚಟುವಟಿಕೆಗಳ ಆರಂಭಕ್ಕೆ ಸಂಬಂಧಿಸಿದಂತೆ ಯಾವುದೇ ಮುಂದಿನ ಕ್ರಮ ಕೈಗೊಳ್ಳಬಾರದು ಎಂದು ತಹಶೀಲ್ದಾರ್ ಸೂಚಿಸಿದ್ದಾರೆ.
ಅಲ್ಲದೆ, ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗುವ ಅಥವಾ ಪ್ರಕರಣದ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮ ಕೈಗೊಳ್ಳದಂತೆ HIAL ಮತ್ತು ಅದರ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನ್ಯಾಯಾಲಯದ ಅಂತಿಮ ತೀರ್ಪು ಅಥವಾ ಮುಂದಿನ ನಿರ್ದೇಶನ ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.
