ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ (Lok Sabha Delimitation) ಹೆಸರಿನಲ್ಲಿ ದೇಶದ ರಾಜಕೀಯ ಭೂಪಟವನ್ನೇ ಬದಲಾಯಿಸಿ ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ಸಂಚು ನಡೆಸಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯ ಬಲವನ್ನ 850 ಸ್ಥಾನಗಳಿಗೆ ಹೆಚ್ಚಿಸುವ ಉದ್ದೇಶದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ (Central Govt) ವಿರುದ್ಧ ಕಿಡಿ ಕಾರಿದ್ರು.
ಮಹಿಳಾ ಮೀಸಲಾತಿಯನ್ನ (Women’s Reservation) ಕ್ಷೇತ್ರ ಪುನರ್ವಿಂಗಡಣೆಗೆ ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದು, ಲೋಕಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆಯಲ್ಲಿಯೇ ಅದನ್ನು ಜಾರಿಗೆ ತರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಸ್ಸಾಂ, ಬಿಹಾರ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗಳನ್ನ ಉಲ್ಲೇಖಿಸಿದ ಅವರು, ಪ್ರಸ್ತಾವಿತ ಮಸೂದೆಯ ಮೂಲಕ ಬಿಜೆಪಿ ತನ್ನ ಚುನಾವಣಾ ಹಿತಾಸಕ್ತಿಗೆ ಅನುಗುಣವಾಗಿ ದೇಶದ ರಾಜಕೀಯ ನಕ್ಷೆಯನ್ನು ಬದಲಿಸಲು ಅವಕಾಶ ಸಿಗಲಿದೆ. ವಿಶೇಷವಾಗಿ ಯುವ ಮತದಾರರು ಹಾಗೂ ಜೆನ್-ಝೀ (Gen Z)ಗಳು 850 ಎಂಬ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಸಂಕೇತ ಎಂದು ಎಚ್ಚರಿಸಿದರು.
ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತಿದ ಬಳಿಕ ಬಿಜೆಪಿ ಹೊಸ ಮಾರ್ಗಗಳನ್ನ ಹುಡುಕುತ್ತಿದೆ. ದೇಶದ ಶೇ.80ರಷ್ಟು ಜನರು ಹಾಗೂ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.100ರಷ್ಟು ಜೆನ್-ಝೀಗಳು ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಈಗ ಮೂವರು ಮಸ್ಕಿಟೀರ್ಗಳು ಹೊಸ ಆಲೋಚನೆಗಳೊಂದಿಗೆ ಬಂದಿದ್ದಾರೆ. ಅದಕ್ಕಾಗಿ ಬಿಜೆಪಿ ಹೊಸ ತಪ್ಪಿಸಿಕೊಳ್ಳುವ ಮಾರ್ಗಗಳನ್ನ ಹುಡುಕುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ 14 ಕೋಟಿ ಮತದಾರರ ಹೆಸರು ಡಿಲೀಟ್ ಆಗಿರುವ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ದೇಶದ 8 ರಾಜ್ಯಗಳಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನ ಕಾಂಗ್ರೆಸ್ ಸಂಗ್ರಹಿಸಿದೆ. ಭಾರತೀಯ ಚುನಾವಣಾ ಆಯೋಗದ ಕುರಿತು ತಮಗೆ ಲಭ್ಯವಾಗಿರುವ ಮಾಹಿತಿಯನ್ನ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಪರಾಧಿ ಸ್ಥಾನದಲ್ಲಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳಿಗೆ ಚುನಾವಣಾ ಆಯೋಗ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಮಹಿಳಾ ಮೀಸಲಾತಿಯನ್ನ ಲೋಕಸಭೆಯ ಸ್ಥಾನಗಳ ಹೆಚ್ಚಳ ಹಾಗೂ ಕ್ಷೇತ್ರಗಳ ಮರುಹಂಚಿಕೆಯೊಂದಿಗೆ ಜೋಡಿಸುವ ಅಗತ್ಯವಿಲ್ಲ. ಬಿಜೆಪಿ ಚುನಾವಣೆ ಅನುಕೂಲ ಮಾಡಿಕೊಳ್ಳಲು ಈ ಕುತಂತ್ರ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

