ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy), ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಅಂತಿಮ ಅಧಿಸೂಚನೆ ಹೊರಡಿಸಿದೆ. ಬಹಳ ದಿನಗಳಿಂದ ಅಲ್ಲಿನ ರೈತರು ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಅಲ್ಲಿ ಯಶಸ್ವಿಯಾಗಿ ಕೃಷಿ, ತೋಟಗಾರಿಕೆ ಕೆಲಸ ನಡೆಯುತ್ತಿದೆ. ಆ ಭಾಗದ ರೈತರಿಂದ ಹಾಲು ಉತ್ಪಾದನೆ ಹೆಚ್ಚಾಗಿದೆ. ಆ ಸ್ಥಳದಲ್ಲಿ ಸರ್ಕಾರ ಒಕ್ಕಲೆಬ್ಬಿಸುವ ಕೆಲಸ ಮಾಡ್ತಿದೆ. ರೈತರಿಗೆ ಬೆಂಬಲ ಕೊಡಲು ಹೋದವರಮೇಲೆ ಪೊಲೀಸರ ಮೂಲಕ ಎಫ್‌ಐಆರ್ ಹಾಕಿ ತೊಂದರೆ ಕೊಡ್ತಿದ್ದಾರೆ ಎಂದು ಆರೋಪಿಸಿದರು.
ಈಗಿನ ಗೃಹ ಸಚಿವರ ಮಾತನ್ನು ನಾನು ಗಮನಿಸಿದ್ದೇನೆ. ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿರೋರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕೆಲವು ರೈತ ವಿರೋಧಿ ಧೋರಣೆಯ ಜನಪ್ರತಿನಿಧಿಗಳು ನಿಂತಿದ್ದಾರೆ. ಯಾವುದೇ ಅಧಿಸೂಚನೆ ಹೊರಡಿಸಿದರೂ ಅಲ್ಲಿನ ರೈತರು ಒಪ್ಪಿಗೆ ಕೊಟ್ಟಿಲ್ಲ. ಶೇಕಡ 80 ರಷ್ಟು ರೈತರ ವಿರೋಧ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಜೀನಾಮೆ ಪರ್ವದ ನಡುವೆ ಟಿಎಂಸಿಗೆ ಶಾಕ್ – ಮಮತಾ ಬ್ಯಾನರ್ಜಿ ವಿರುದ್ಧ FIR
ಸರ್ಕಾರ ದಬ್ಬಾಳಿಕೆ ರೀತಿ ನಾವು ಮಾಡಿದ್ದೇ ತೀರ್ಮಾನ ಎಂದು ಹೊರಟಿದ್ದಾರೆ. ಕೃಷಿಯಿಂದ ಅಲ್ಲಿನ ರೈತರು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ . ಅಂತಹ ಭಾಗದಲ್ಲಿ ಈ ಯೋಜನೆ ಮಾಡಬೇಕೆಂದು ಹೊರಟಿದ್ದಾರೆ. 2006ರಲ್ಲಿ ಈ ಯೋಜನೆ ಮಾಡಬೇಕೆಂದು ನಿರ್ಧಾರ ಮಾಡಿದ್ದು ನಾನೇ. ಆಗ ಇದೇ ಕಾಂಗ್ರೆಸ್‌ನವರು ವಿರೋಧ ಮಾಡಿದ್ದರು. ಸತ್ಯಶೋಧನ ಸಮಿತಿ ವರದಿ ಹಾಗೂ ಜನರ ಅಭಿಪ್ರಾಯ ಗಮನಿಸಿ ನಾನು ಯೋಜನೆ ಕೈ ಬಿಟ್ಟಿದ್ದೆ. ಈಗಿನ ಸರ್ಕಾರ ಬೆಂಗಳೂರು ದಕ್ಷಿಣ ವ್ಯಾಪ್ತಿಯನ್ನು ವಿಸ್ತರಣೆ ಮಾಡಿ ಜನವಿರೋಧಿ ನೀತಿ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ಕಾನೂನಿನ ಹೋರಾಟ ಮಾಡಲಿ ಎಂದಿದ್ದಾರೆ. ನೀವು ರೈತರ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದ್ದೀರಿ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ದೊಡ್ಡಬಳ್ಳಾಪುರ ಭಾಗದಲ್ಲೂ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಬೇಕಿದ್ದರೆ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಡೋಣ. ಮುಖ್ಯಮಂತ್ರಿಗಳೇ ಬಂದು ಹಳ್ಳಿ ಜನರನ್ನು ಕೇಳಲಿ. ಎಷ್ಟು ಜನರು ಅದಕ್ಕೆ ಒಪ್ಪಿಕೊಂಡಿದ್ದಾರೆ ಚರ್ಚೆ ಮಾಡಲಿ. ನಾನು ಹೋಗಬೇಕಾಗಿಲ್ಲ, ಜನರೇ ಮಾತಾಡ್ತಾರೆ. ಯಾವ ಶಾಸಕರ ಹೆಸರು ಹೇಳ್ತೀರೋ ಅವರನ್ನು ಜನರೇ ಓಡಾಡಿಸುತ್ತಿದ್ದಾರೆ. ಯಾವುದೇ ಯೋಜನೆ ತರೋದಾದರೆ ರೈತರ ಮನವೊಲಿಸಿ ಮಾಡಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡಿ ಮಾಡೇ ಮಾಡ್ತೀವಿ ಅನ್ನೋದು ನಿಮಗೆ ತಿರುಗುಬಾಣವಾಗುತ್ತದೆ, ಕಾದು ನೋಡಿ ಎಂದು ಭವಿಷ್ಯ ನುಡಿದರು.
ಕಟ್ಟಡ ಒಡೆಯೋದು ತಪ್ಪು:
ಸರ್ಕಾರಿ ನಿವಾಸ ಮಾಡಿಕೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ ಕುಮಾರಕೃಪ ಅತಿಥಿ ಗೃಹದ ಪಾರಂಪರಿಕ ಕಟ್ಟಡ ಒಡೆಯುತ್ತಿರುವುದಕ್ಕೂ ಕುಮಾರಸ್ವಾಮಿ ಕಿಡಿಕಾರಿದರು. ಅದನ್ನು ಅವರು ಮನೆ ಮಾಡಿಕೊಳ್ಳದಿರಲಿ. ಇನ್ನೂ 8 ವರ್ಷ ನಾನೇ ಇರುತ್ತೇನೆ ಅಂತ ಹೇಳ್ತಾರಲ್ಲ. ಮುಂದಿನ ಐದು ವರ್ಷ ಇವರೇ ಮುಂದುವರಿದರೆ ವಿಧಾನಸೌಧಕ್ಕೆ ಏನು ಮಾಡ್ತಾರೋ ಎಂದು ಗಾಬರಿ ಆಗಿದೆ ನನಗೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಭಾರೀ ಮಳೆ – 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಈ ರೀತಿ ಪಾರಂಪರಿಕ ಕಟ್ಟಡವನ್ನು ಮನೆಗೆ ಬಳಸಿಕೊಳ್ಳೋದು ತಪ್ಪು. ಇದು ಮಹಾರಾಜರ ಕಾಲದಲ್ಲಿ ಕಟ್ಟಿದ ಕಟ್ಟಡ. ಅಲ್ಲಿ ಹೋಗಿ ಅದನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪಕ್ಕದಲ್ಲೇ ಇವರು ಕಟ್ಟಿರುವ ಗೆಸ್ಟ್ ಹೌಸ್ ಇದೆ. ಆದರೆ ಮನೆಗಾಗಿ ಇಂತಹ ಪಾರಂಪರಿಕ ಕಟ್ಟಡ ಒಡೆಯುವ ಅವಶ್ಯಕತೆ ಇರಲಿಲ್ಲ ಎಂದು ಕಿಡಿಕಾರಿದರು.
