– ನಕಲಿ ಕೀ ಬಳಸಿ ಮನೆಯೊಳಗೆ ಎಂಟ್ರಿ ಕೊಟ್ಟ ಇ.ಡಿ ಟೀಂ
ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಕೀಯ ನೇಮಕಾತಿ ಹಗರಣದಲ್ಲಿ ಶಿವಶಂಕರಪ್ಪ ಸಾಹುಕಾರ್‌ಗೆ ಶಾಕ್ ಕೊಟ್ಟಿರುವ ಇ.ಡಿ. (ಜಾರಿ ನಿರ್ದೇಶನಾಲಯ) ಈಗ ಎಕ್ಸಾಂ ಕಂಟ್ರೋಲರ್, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಬೆನ್ನತ್ತಿದೆ.
ಇಡಿ ರೇಡ್ ಭೀತಿಯಲ್ಲಿ ಗ್ಯಾನೇಂದ್ರ ಕುಮಾರ್ (Gyanendra Kumar) ಅಜ್ಞಾತವಾಗಿದ್ದಾರೆ ಅಂತ ವರದಿ ಮಾಡಲಾಗಿತ್ತು. ಆದರೆ, ತಂದೆಗೆ ಅನಾರೋಗ್ಯ ಅಂತ ಗ್ಯಾನೇಂದ್ರ ಕುಮಾರ್ ದಿಢೀರ್ ಉತ್ತರ ಪ್ರದೇಶದ ಊರಿಗೆ ಹೋಗಿದ್ದಾರೆ ಅಂತ ನಿನ್ನೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೇಪೆ ಹಚ್ಚಿದ್ದರು. ಆದರೀಗ, ʻಪಬ್ಲಿಕ್‌ಟಿವಿʼಯ ವರದಿಯೇ ನಿಜವಾಗಿದೆ.
ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಗ್ಯಾನೇಂದ್ರ ಕುಮಾರ್ ಮನೆ ಮೇಲೆ ಇ.ಡಿ. ರೇಡ್ ಮಾಡಿದೆ. ಸಿಆರ್‌ಪಿಎಫ್ ಸೆಕ್ಯೂರಿಟಿ ಮನೆಯ ಗೇಟ್ ಲಾಕ್ ಮಾಡಿದ್ದು, ಸಾಹೇಬರು ಇಲ್ಲ. ಆಮೇಲೆ ಬನ್ನಿ ಅಂದಿದ್ದಾರೆ. ನಿಮ್ಮ ಸಾಹೇಬರ ಫೋನ್ ಸ್ವಿಚ್ಡ್ ಆಫ್ ಆಗಿದೆ ಅಂತ ದಾಳಿಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಸ್ಥಳೀಯ ಪೊಲೀಸರನ್ನು ಕರೆತಂದ ಇಡಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಇನ್ನೂ, ಗ್ಯಾನೇಂದ್ರಕುಮಾರ್ ಸುಳಿವು ಸಿಗದಿರೋದ್ರಿಂದ ವಾರೆಂಟ್ ಜಾರಿಗೂ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಮಧ್ಯೆ, ಪ್ರಶ್ನೆ ಪತ್ರಿಕೆ ಸೋರಿಕೆ ಖಚಿತವಾಗಿದೆ. ಅಭ್ಯರ್ಥಿಯೊಬ್ಬರು ಇ.ಡಿ. ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.


