ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ(India) ಮತ್ತು ಅಫ್ಘಾನಿಸ್ತಾನ(Afghanistan) ನಡುವಿನ ಮೊದಲ ಟಿ20 ಪಂದ್ಯಕ್ಕೂ ಮುನ್ನ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ(Vande Mataram) ಅನ್ನು ಹಾಡಲಾಯಿತು.
ಮೂರು ಪಂದ್ಯಗಳ ಟಿ20 ಸರಣಿಯ ಆರಂಭದ ವೇಳೆ ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಸಾಲಾಗಿ ನಿಂತಾಗ ಈ ಅಪರೂಪದ ಕ್ಷಣ ದಾಖಲಾಯಿತು.
ಸಾಮಾನ್ಯವಾಗಿ ರಾಷ್ಟ್ರಗೀತೆಯಾದ ‘ಜನ ಗಣ ಮನ’ದಿಂದ ಆರಂಭವಾಗುತ್ತಿದ್ದ ಕ್ರೀಡಾಂಗಣದಲ್ಲಿ, ಮೊದಲು ‘ವಂದೇ ಮಾತರಂ’ ನುಡಿಸಲಾಯಿತು. ರಾಷ್ಟ್ರೀಯ ಗೀತೆ ಮುಗಿದ ಬೆನ್ನಲ್ಲೇ ರಾಷ್ಟ್ರಗೀತೆಯನ್ನು ನುಡಿಸಲಾಯಿತು.
For the first time today, along with India’s national anthem, “Vande Mataram” was also played after “Jana Gana Mana” during the first match of the Afghanistan T20I series.🇮🇳❤️ pic.twitter.com/CQRMqoi8pY
— 𝐑𝐮𝐬𝐡𝐢𝐢𝐢⁴⁵ (@rushiii_12) September 13, 2026
ಭಾರತದ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಕುರಿತು ಕೇಂದ್ರ ಗೃಹ ಸಚಿವಾಲಯ ಈ ವರ್ಷದ ಆರಂಭದಲ್ಲಿ ಹೊರಡಿಸಿದ್ದ ಅಧಿಸೂಚನೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಜನವರಿ 28 ರಂದು ಹೊರಡಿಸಿದ ನಿರ್ದೇಶನದಲ್ಲಿ, ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡಬೇಕೆಂಬ ಶಿಷ್ಟಾಚಾರ ನಿಗದಿಪಡಿಸಲಾಗಿದೆ. ಸಂಪೂರ್ಣ ಆರು ಚರಣಗಳನ್ನು ಹಾಡಲು ಸುಮಾರು 3 ನಿಮಿಷ 10 ಸೆಕೆಂಡುಗಳ ಕಾಲಾವಕಾಶ ಬೇಕಾಗುತ್ತದೆ.
ರಾಷ್ಟ್ರಗೀತೆಯೊಂದಿಗೆ ರಾಷ್ಟ್ರೀಯ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕಾದ ಸಂದರ್ಭಗಳು ಮತ್ತು ಕಾರ್ಯಕ್ರಮಗಳ ಪಟ್ಟಿಯನ್ನು ಸಚಿವಾಲಯ ಬಿಡುಗಡೆ ಮಾಡಿತ್ತು. ಆದರೆ ಈ ಪಟ್ಟಿಯಲ್ಲಿ ಕ್ರೀಡಾಕೂಟಗಳು ನೇರವಾಗಿ ಒಳಗೊಂಡಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ನಂತರ, ಆಗಸ್ಟ್ 15 ರಂದು ಮೊದಲ ಬಾರಿಗೆ ‘ವಂದೇ ಮಾತರಂ’ ಮತ್ತು ‘ಜನ ಗಣ ಮನ’ ಎರಡನ್ನೂ ಸಂಪೂರ್ಣವಾಗಿ ಜತೆಯಾಗಿ ಹಾಡಲಾಗಿತ್ತು. ಈಗ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೂ ಈ ಸಂಪ್ರದಾಯ ಮುಂದುವರಿದಿದೆ.

