ಮುಂಬೈ: ಕೇತನ್ (Ketan Agarwal) ಜೊತೆ ಮದುವೆ ನನಗೆ ಇಷ್ಟ ಇಲ್ಲ ಎಂದು ಸಿಯಾ (Siya Goyal) ಹೇಳಿದ್ದರೆ ಆ ಮದುವೆಯನ್ನೇ ನಾವು ನಿಲ್ಲಿಸುತ್ತಿದ್ದೆವು ಎಂದು ಆಕೆಯ ಸಹೋದರ ಸಾಹಿಲ್ ಗೋಯಲ್ ಪೊಲೀಸರೆದುರು ಹೇಳಿದ್ದಾರೆ.
ಜೂ.26 ರಂದು ಸುಮಾರು 10 ಗಂಟೆಗಳ ಕಾಲ ನಡೆದ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಸಾಹಿಲ್ ಈ ಹೇಳಿಕೆ ನೀಡಿದ್ದಾರೆ. ಪೊಲೀಸರು ಅವರನ್ನು ಬೆಳಿಗ್ಗೆ ವಿಚಾರಣೆಗೆ ಕರೆಸಿದ್ದರು. ಸಂಜೆ ಮನೆಗೆ ಮರಳಲು ಅವರಿಗೆ ಅವಕಾಶ ನೀಡಲಾಯಿತು. ವಿಚಾರಣೆಯ ವೇಳೆ ಹಲವಾರು ಪ್ರಮುಖ ವಿಚಾರಗಳು ತಿಳಿದು ಬಂದಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಮಗಳು ತಪ್ಪು ಮಾಡಿದ್ರೆ ಅದೇ ಕೋಟೆಯಿಂದ ತಳ್ಳಿ ಬಿಡಿ – ಸಿಯಾ ಪೋಷಕರ ಆಕ್ರೋಶ
ಹೇರ್ ವಿಗ್‌ನಿಂದಾಗಿ ಹತ್ಯೆ – ಕಾರಣ ತಳ್ಳಿಹಾಕಿದ ಕೇತನ್ ತಂದೆ
ಕೇತನ್ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್, ತಮ್ಮ ಮಗ ವಿಗ್ ಬಳಸಿದ್ದು ಕೊಲೆಗೆ ಕಾರಣವಾಗಿರಬಹುದು ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ.

ಕೇತನ್‌ಗೆ ವೈದ್ಯಕೀಯ ಕಾರಣಗಳಿಂದಾಗಿ ಸಣ್ಣ ಪ್ರಮಾಣದಲ್ಲಿ ಕೂದಲು ಉದುರಿತ್ತು. ಮದುವೆ ಅಂತಿಮಗೊಳ್ಳುವ ಮೊದಲೇ ಇದನ್ನು ಸ್ಪಷ್ಟವಾಗಿ ಸಿಯಾಳಿಗೆ ತಿಳಿಸಲಾಗಿತ್ತು. ಆಕೆಗೆ ಇದು ಸಮಸ್ಯೆಯಾಗಿದ್ದರೆ ಹೇಳಬಹುದಿತ್ತು. ಆಗ ಮದುವೆಯನ್ನು ರದ್ದುಗೊಳಿಸಲು ಅವಕಾಶವಿತ್ತು ಎಂದಿದ್ದಾರೆ.
ಆಘಾತಕಾರಿ ಘಟನೆ ಎಂದ ಸಿಎಂ ಫಡ್ನವೀಸ್
ಪ್ರಕರಣವು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಕೇತನ್ ತಂದೆಯನ್ನು ಭೇಟಿಯಾಗಿ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂಬ ಕುಟುಂಬದ ಬೇಡಿಕೆಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಉಜ್ವಲ್ ನಿಕಮ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸಿದೆ.
ಈ ಘಟನೆಯನ್ನು ಆಘಾತಕಾರಿ ಎಂದು ಕರೆದ ಫಡ್ನವೀಸ್, ಇದು ಸಾಮಾಜಿಕ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಉತ್ತಮ ಕುಟುಂಬಗಳ ವಿದ್ಯಾವಂತ ಯುವಕರು ಮತ್ತು ಮಹಿಳೆಯರು ಇಂತಹ ಕ್ರಿಮಿನಲ್ ಉದ್ದೇಶ ಮತ್ತು ಸೇಡು ತೀರಿಸಿಕೊಳ್ಳುವ ಮನಸ್ಥಿತಿಯನ್ನು ಏಕೆ ಬೆಳೆಸಿಕೊಳ್ಳುತ್ತಾರೆ ಎಂಬುದರ ಕುರಿತು ನಾವು ಯೋಚಿಸಬೇಕಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಇಬ್ಬರ ಪಾತ್ರ ದೃಢ – ಗಜಾನನ್ ಟೋನ್ಪೆ
ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ. ಸಂಬಂಧಿಕರು ಮತ್ತು ಸ್ನೇಹಿತರನ್ನು ಹೆಚ್ಚಿನ ವಿಚಾರಣೆಗೆ ಕರೆಸಲಾಗುವುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಲೋನಾವಾಲ ವಿಭಾಗ) ಗಜಾನನ್ ಟೋನ್ಪೆ ಹೇಳಿದ್ದಾರೆ.
ಪೊಲೀಸರು ಇಲ್ಲಿಯವರೆಗೆ ಏಳು ಜನರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ತನಿಖಾಧಿಕಾರಿಗಳು ನಕಲಿ ದೇಹವನ್ನು ಬಳಸಿಕೊಂಡು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಿ, ಮಾಹಿತಿ ಕಲೆಹಾಕಿದ್ದಾರೆ. ಇದನ್ನೂ ಓದಿ: ಕೇತನ್ ಕೊಲೆಗೆ ಸಿಯಾಳೇ ಪ್ಲ್ಯಾನ್ ಮಾಡಿದ್ದು.. ಹತ್ಯೆಗೆ ಪ್ರಿಯಕರ ಒತ್ತಾಯಿಸಿದ್ದ: ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ
