– ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25, ವಿಎಒನಲ್ಲಿ 151.25 ಅಂಕ!
– ರಾಜ್ಯಕ್ಕೆ ಪ್ರಥಮ ಬಂದಿದ್ದ ಅಭ್ಯರ್ಥಿಯ ಕಳ್ಳಾಟ ಬಯಲು
ಹಾವೇರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಆಡಳಿತ ಅಧಿಕಾರಿ (VA Exam) ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದ ಅಭ್ಯರ್ಥಿ ಹಾನಗಲ್ ಎಲೆಪೇಟೆ ನಿವಾಸಿ ಶಂಕರ ಬನ್ನೂರ ಅಸಲಿ ಬಂಡವಾಳ ಬಯಲಾಗಿದೆ.
ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಅಭ್ಯರ್ಥಿ, ವಿಎಒ ಪರೀಕ್ಷೆಯಲ್ಲಿ ಬರೋಬ್ಬರಿ 151.25 ಅಂಕ ಗಳಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆತ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಿ ಗೂಗಲ್ ಲೆನ್ಸ್(Google Lens) ಮೂಲಕ ಅಕ್ರಮ ಎಸಗಿರುವುದು ಸಾಬೀತಾಗಿದೆ. ಈತನನ್ನು ಹಾನಗಲ್ ಠಾಣೆ ಪೊಲೀಸರು(Hangal Police Station) ವಶಕ್ಕೆ ಪಡೆದು, ತಡರಾತ್ರಿ ಶಿಗ್ಗಾವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕೆಎಸ್ಆರ್ಪಿ (KSRP) ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನು ಮಾತ್ರ ಪಡೆದಿದ್ದ ಶಂಕರ ಬನ್ನೂರ, ಕೇವಲ 15 ದಿನಗಳ ಅಂತರದಲ್ಲಿ (ಅಕ್ಟೋಬರ್ 4 ರಂದು) ನಡೆದ ವಿಎಒ ಪರೀಕ್ಷೆಯಲ್ಲಿ 151.25 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಲಿ ಪಡೆದಿದ್ದ. ಒಎಂಆರ್ ಶೀಟ್ನಲ್ಲಿ ಒಂದೇ ಒಂದು ತಪ್ಪು ಅಥವಾ ಹೆಚ್ಚುವರಿ ಮಾರ್ಕಿಂಗ್ ಇಲ್ಲದೆ ಇಷ್ಟು ಗರಿಷ್ಠ ಅಂಕ ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಹಾಗೂ ಅನುಮಾನಕ್ಕೆ ಕಾರಣವಾಗಿತ್ತು.
ಪ್ರಕರಣದ ಗಂಭೀರತೆ ಅರಿತ ಕೆಇಎ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಅವರು ಸಮಗ್ರ ತನಿಖೆ ನಡೆಸುವಂತೆ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸವಣೂರು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಶಿಗ್ಗಾವಿಯ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಕೊಂಡೊಯ್ದಿದ್ದ ಶಂಕರ, ಪ್ರಶ್ನೆ ಪತ್ರಿಕೆಯನ್ನು ಗೂಗಲ್ ಲೆನ್ಸ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ಉತ್ತರ ಪಡೆದಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಇದನ್ನೂ ಓದಿ: ವಿಎ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್| ಸಾಮಾಜಿಕ ಜಾಲತಾಣದಲ್ಲಿ ಅನುಮಾನ -ನಾನು ಯಾವ ತನಿಖೆಗೂ ಸಿದ್ಧ: ಶಂಕರ್ ಬನ್ನೂರ
ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಕರ್ತವ್ಯ ಲೋಪದ ಕುರಿತು ತನಿಖೆ ಮುಂದುವರಿದಿದೆ.
