ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ(Cabinet Expansion) ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆದಂತಿದೆ. ಜೂನ್ 27 ಅಥವಾ 29 ರಂದು ಅಧಿಕೃತವಾಗಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳಿದೆ.
ಜೂನ್ 18 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ(Vidhan Parishad Election) ಹಾಗೂ ಜೂನ್ 21 ರಂದು ನಿಗದಿಯಾಗಿರುವ ಕೆಪಿಸಿಸಿ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮದ ಬೆನ್ನಲ್ಲೇ ಸಂಪುಟ ಕಸರತ್ತು ತೀವ್ರಗೊಳ್ಳಲಿದೆ.
ಜೂನ್ 23 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜಂಟಿಯಾಗಿ ದೆಹಲಿಗೆ ತೆರಳಲಿದ್ದಾರೆ. ಜೂನ್ 24 ಮತ್ತು 25 ರಂದು ಎಐಸಿಸಿ ವರಿಷ್ಠರೊಂದಿಗೆ ಸರಣಿ ಸಭೆಗಳು ನಡೆಯಲಿದ್ದು, ಸಚಿವರಾಗುವ ಅಂತಿಮ ಪಟ್ಟಿ ಫೈನಲ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶ: ಪಾದರಾಯನಪುರದಲ್ಲಿ ಜಮೀರ್ ಬೆಂಬಲಿಗರ ಪ್ರತಿಭಟನೆ, ಇಮ್ರಾನ್ ಪಾಷಾ ವಶಕ್ಕೆ
ವಿಳಂಬವಾಗುತ್ತಿರುವ ಸಂಪುಟ ಪ್ರಕ್ರಿಯೆಗೆ ಸಂಪೂರ್ಣ ಮುಕ್ತಿ ನೀಡಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್, ಒಂದೇ ಸಲ 20 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಲವು ವ್ಯಕ್ತಪಡಿಸಿದೆ. ಇದರಲ್ಲಿ ಎಷ್ಟು ಹಳೇ ಮುಖಗಳಿಗೆ ಮತ್ತೆ ಮಣೆ ಸಿಗಲಿದೆ ಮತ್ತು ಎಷ್ಟು ಜನ ಹೊಸ ಮುಖಗಳಿಗೆ ಹೈಕಮಾಂಡ್ ಚಾನ್ಸ್ ನೀಡಲಿದೆ ಎಂಬುದು ಸದ್ಯದ ದೊಡ್ಡ ಯಕ್ಷಪ್ರಶ್ನೆಯಾಗಿದೆ.
ಈ ಬಾರಿಯ ಸಂಪುಟ ವಿಸ್ತರಣೆಯು ಸಂಪೂರ್ಣವಾಗಿ ‘ರಾಹುಲ್ ಗಾಂಧಿ ಸೂತ್ರ’ದ ಅಡಿಯಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಕಾರ್ಯಕ್ಷಮತೆ, ಸಾಮಾಜಿಕ ನ್ಯಾಯ ಹಾಗೂ ಯುವ ನಾಯಕತ್ವಕ್ಕೆ ಆದ್ಯತೆ ನೀಡುವ ರಾಹುಲ್ ಫಾರ್ಮುಲಾದ ಮಧ್ಯೆ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದ ಎಷ್ಟು ಜನರಿಗೆ ಮಂತ್ರಿ ಪಟ್ಟ ಕೊಡಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
