ಬೆಂಗಳೂರು: ಶಿವಾಜಿನಗರದಲ್ಲಿ ಫುಟ್‌ಪಾತ್ (Shivajinagar Footpath) ತೆರವು ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ನಡೆಸಿದ್ದ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕೊನೆಗೂ ತಪ್ಪೊಪ್ಪಿಕೊಂಡಿದ್ದಾರೆ. ನಾವು ಮಾಡಿದ್ದು ತಪ್ಪು ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.
ಯಾರು ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇನ್ಮುಂದೆ ಯಾವತ್ತೂ ತಪ್ಪು ಮಾಡೋದಿಲ್ಲ ಎಂದು ಆರೋಪಿಗಳು (Accused) ಪೊಲೀಸರ ಎದುರು ಕೈಮುಗಿದು ಬೇಡಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ನಂತರದ ವಿಡಿಯೋಗಳನ್ನ ಪೊಲೀಸರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದಾಳಿಗೆ ಮೊದಲೇ ಸಂಚು ರೂಪಿಸಲಾಗಿತ್ತು
ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ (GBA) ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಹೊಸ ಮಾಹಿತಿ ಹೊರಬಿದ್ದಿದೆ. ಘಟನೆಗೆ ಮುಂಚೆಯೇ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳು ಇಲ್ಲ ಸಮಯ ನೋಡಿಕೊಂಡು ದಾಳಿಗೆ ಪ್ಲ್ಯಾನ್
ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಸೇರಿ 11 ಮಂದಿಯನ್ನ ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯಲಿರುವ ಮಾಹಿತಿ ಸಿಕ್ಕ ತಕ್ಷಣವೇ ದಾಳಿ ನಡೆಸಲು ಆರೋಪಿಗಳು ಪ್ಲ್ಯಾನ್ ಮಾಡಿದ್ದಾರೆ. ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ತನ್ನ ಚಾಲಕನ ಮೂಲಕ ಪೆಪ್ಪರ್ ಸ್ಪ್ರೇ ಖರೀದಿಸಿದ್ದ ಎನ್ನುವ ಮಾಹಿತಿಯೂ ತನಿಖೆಯಲ್ಲಿ ಗೊತ್ತಾಗಿದೆ. ಕಾರ್ಯಾಚರಣೆ ವೇಳೆ ಪೊಲೀಸರು ಮತ್ತು ಮಾಧ್ಯಮದವರು ಸ್ಥಳದಲ್ಲಿ ಇಲ್ಲದ ಸಮಯ ನೋಡಿಕೊಂಡು ದಾಳಿ ನಡೆಸುವಂತೆ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಹಲ್ಲೆಯ ನಂತರ ಪ್ರಕರಣಕ್ಕೆ ಕನ್ನಡ ಧ್ವಜ ಮತ್ತು ಗಣೇಶ ದೇವಸ್ಥಾನದ ವಿಚಾರವನ್ನ ಜೋಡಿಸಿ ಘಟನೆಯ ದಿಕ್ಕುತಪ್ಪಿಸುವ ಪ್ಲ್ಯಾನ್ ಕಡ ಇವರದ್ದಾಗಿತ್ತು ಅನ್ನೋ ಅನುಮಾನ ಮೂಡಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಬಹುತೇಕ ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಸೇರಿ ಮೂವರು ಆರೋಪಿಗಳನ್ನ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.
