ಬೆಂಗಳೂರು: ರಾಜ್ಯ ಸಚಿವ ಸಂಪುಟದ (Cabinet) ಮೊದಲ ಹಂತದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್(Zameer Ahmed Khan) ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನ ಪಾದರಾಯನಪುರದಲ್ಲಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪಾಲಿಕೆ ಮಾಜಿ ಸದಸ್ಯ ಇಮ್ರಾನ್ ಪಾಷಾ(Imran Pasha) ನೇತೃತ್ವದಲ್ಲಿ ಜಮೀರ್ ಅಹಮ್ಮದ್ ಅವರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕೆಂದು ಒತ್ತಾಯಿಸಿ ‘ವಿಧಾನಸೌಧ ಚಲೋ’ ಪಾದಯಾತ್ರೆಗೆ ಕರೆ ನೀಡಲಾಗಿತ್ತು. ಆದರೆ, ಹೈಕೋರ್ಟ್ ನಿರ್ದೇಶನದಂತೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಇರುವುದರಿಂದ ಪೊಲೀಸರು ಪಾದಯಾತ್ರೆಗೆ ಅನುಮತಿ ನಿರಾಕರಿಸಿದರು.
ಮುಂಜಾಗ್ರತಾ ಕ್ರಮವಾಗಿ ಹೊಸಹಳ್ಳಿ ಫ್ಲೈಓವರ್ ಮತ್ತು ಪಾದರಾಯನಪುರ ಮುಖ್ಯ ರಸ್ತೆಯನ್ನು ಬಂದ್ ಮಾಡಿ, ಬಿಗುವಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಸ್ಥಳದಲ್ಲಿ ಕೆಎಸ್‌ಆರ್‌ಪಿ (KSRP) ತುಕಡಿ ಹಾಗೂ ಸಿಆರ್ ತಂಡಗಳನ್ನು ನಿಯೋಜಿಸಲಾಗಿತ್ತು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾದರಾಯನಪುರ ಮುಖ್ಯ ರಸ್ತೆಯ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಜಮೀರ್ ಅಹಮ್ಮದ್ ಅವರ ಪೋಸ್ಟರ್ ಹಾಗೂ ಫೋಟೋಗಳನ್ನು ಹಿಡಿದ ನೂರಾರು ಮಹಿಳೆಯರು ಮತ್ತು ಪುರುಷರು ಇಮ್ರಾನ್ ಪಾಷಾ ಕಚೇರಿ ಬಳಿ ಜಮಾಯಿಸಿದರು. ಪೊಲೀಸರು ರಸ್ತೆಯ ಮಧ್ಯೆ ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ಗಲ್ಲಿಗಳಲ್ಲಿಯೇ ತಡೆದರೂ, ನೂಕಾಟ-ತಳ್ಳಾಟ ನಡೆಸಿ ಪ್ರತಿಭಟನಾಕಾರರು ರಸ್ತೆಗೆ ಧಾವಿಸಿ ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿ ಸಮುದ್ರಪಾಲು

ಪ್ರತಿಭಟನೆ ವೇಳೆ ಮಾತನಾಡಿದ ಇಮ್ರಾನ್ ಪಾಷಾ, ಜಮೀರ್ ಅಹಮ್ಮದ್ ಅವರು ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗದಿರುವುದು ಸಮುದಾಯಕ್ಕೆ ನೋವು ತಂದಿದೆ. ಈ ಹಿಂದೆ ಎಸ್.ಎಂ. ಕೃಷ್ಣ ಅವರ ನೇತೃತ್ವದ ಸರ್ಕಾರದಲ್ಲಿ ಐದು ಮುಸ್ಲಿಂ ಮುಖಂಡರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಡಿ.ಕೆ. ಶಿವಕುಮಾರ್ (DK Shivakumar) ಅವರ ಸಂಪುಟದಲ್ಲಿ ನಾಲ್ಕು ಜನರಿಗೆ ಅವಕಾಶ ಸಿಗುವ ವಿಶ್ವಾಸವಿದ್ದು, ಅದರಲ್ಲಿ ಜಮೀರ್ ಅವರಿಗೂ ಸ್ಥಾನ ಸಿಗಲೇಬೇಕು. ನಾನು ಜೆಡಿಎಸ್ ಪಕ್ಷದಲ್ಲಿದ್ದರೂ ಜಮೀರ್ ಅವರಿಗಾಗಿ ಈ ಹೋರಾಟ ಮಾಡುತ್ತಿದ್ದೇನೆ. ಒಂದು ವೇಳೆ ಅವರಿಗೆ ಅವಕಾಶ ಸಿಗದಿದ್ದರೆ ಮುಂದೆಯೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಇಮ್ರಾನ್ ಪಾಷಾ ಅವರನ್ನು ವಶಕ್ಕೆ ಪಡೆದರು. ನಾಯಕನನ್ನು ವಶಕ್ಕೆ ಪಡೆದ ಪೊಲೀಸ್ ವಾಹನದ ಹಿಂದೆಯೇ ಓಡಿದ ಬೆಂಬಲಿಗರು ರಸ್ತೆಯಲ್ಲೇ ಕುಳಿತು ಆಕ್ರೋಶ ಹೊರಹಾಕಿದರು. ಬಳಿಕ ಪೊಲೀಸರು ರಸ್ತೆಗೆ ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ, ಪ್ರತಿಭಟನೆಗೆ ಬಂದಿದ್ದ ಮಹಿಳೆಯರು ಸೇರಿದಂತೆ ಇತರೆ ಪ್ರತಿಭಟನಾಕಾರರನ್ನು ಬಿಎಂಟಿಸಿ ಬಸ್‌ಗಳಿಗೆ ಹತ್ತಿಸಿ ವಶಕ್ಕೆ ಪಡೆದರು. ಸದ್ಯ ಪೊಲೀಸರು ಸಾರ್ವಜನಿಕರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
