ಮಡಿಕೇರಿ: ಆಗಸ್ಟ್ 15ರಿಂದ 30ರವರೆಗೆ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ (FIH Hockey World Cup) ನಡೆಯಲಿರುವ 16ನೇ ಆವೃತ್ತಿಯ ಎಫ್‌ಐಎಚ್ (FIH) ಹಾಕಿ ವಿಶ್ವಕಪ್ ಟೂರ್ನಿಗೆ ಭಾರತದ ಪುರುಷರ ತಂಡವನ್ನು ಪ್ರಕಟಿಸಲಾಗಿದ್ದು, ಕೊಡಗಿನ ಕೂಡಿಗೆ ಕ್ರೀಡಾಶಾಲೆಯ (Kodagu Sports School) ಕ್ರೀಡಾಪಟು ಮೋಹಿತ್ ಹೆಚ್.ಎಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
24 ವರ್ಷದ ಮೋಹಿತ್, 2015ರಲ್ಲಿ ಕೂಡಿಗೆ ಕ್ರೀಡಾಶಾಲೆಗೆ ಸೇರ್ಪಡೆಯಾಗಿದ್ದರು. 2018ರವರೆಗೆ ಅಲ್ಲಿನ ಹಾಕಿ ತರಬೇತುದಾರ ಸಂಜಯ್ ಬಾಣದ ಅವರಿಂದ ತರಬೇತಿ ಪಡೆದ ಅವರು, ಗೋಲ್‌ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿ ಇದೀಗ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ವಿಶ್ವಕಪ್ ಆಡಲು ಅರ್ಹತೆ ಪಡೆದಿದ್ದಾರೆ.
ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಿರುವ ಆಟಗಾರರ ಪೈಕಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ಮೋಹಿತ್ ಅವರಿಗೆ ಸಲ್ಲುತ್ತದೆ. ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹೊನ್ನೆನಹಳ್ಳಿ ಗ್ರಾಮದ ಶಶಿಕುಮಾರ್ ಮತ್ತು ಆಶಾರಾಣಿ ದಂಪತಿಯ ಪುತ್ರ.
5 ದಶಕಗಳ ಬಳಿಕ ವಿಶ್ವಕಪ್ ಕನಸು
1971ರಲ್ಲಿ ಆರಂಭವಾದ ಹಾಕಿ ವಿಶ್ವಕಪ್‌ನಲ್ಲಿ ಭಾರತ 1975ರ ಮೂರನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಅದಾದ ಬಳಿಕ ಕಳೆದ ಐದು ದಶಕಗಳಿಂದ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2023ರಲ್ಲಿ ಭಾರತದಲ್ಲೇ ನಡೆದ ವಿಶ್ವಕಪ್‌ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ತಂಡ ವಿಫಲವಾಗಿತ್ತು. ಇದನ್ನೂ ಓದಿ: ನಾಳೆಯಿಂದ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ – ಕೇವಲ 10 ವಿಭಾಗಳಲ್ಲಿ ಸ್ಪರ್ಧೆ
ಆದರೆ, 2020 ಮತ್ತು 2024ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಹಾಗೂ 2025ರ ಏಷ್ಯಾ ಕಪ್ ಪ್ರಶಸ್ತಿ ಗೆದ್ದಿರುವ ಭಾರತ, ಈ ಬಾರಿ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಈ ಬಾರಿ ಟೂರ್ನಿಯಲ್ಲಿ 16 ತಂಡಗಳು ಸ್ಪರ್ಧಿಸಲಿವೆ. ಭಾರತ ಇಂಗ್ಲೆಂಡ್, ವೇಲ್ಸ್ ಮತ್ತು ಪಾಕಿಸ್ತಾನ ತಂಡಗಳಿರುವ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತೀಯ ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದು, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್‌ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್‌ದೀಪ್ ಸಿವಾಚ್, ರಜೀಂದರ್ ಸಿಂಗ್, ಆದಿತ್ಯ ಅರ್ಜುನ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್, ದಿಲ್‌ಪ್ರೀತ್ ಸಿಂಗ್, ಶಿಲಾನಂದ್ ಲಕ್ಷರಾ, ಸುಖ್‌ಜೀತ್, ಮಂದೀಪ್ ಸಿಂಗ್, ಅಭಿಷೇಕ್ ಹಾಗೂ ಗೋಲ್‌ಕೀಪರ್‌ಗಳಾಗಿ ಸೂರಜ್ ಕರ್ಕೇರ ಮತ್ತು ಮೋಹಿತ್ ಹೆಚ್.ಎಸ್ ಸ್ಥಾನ ಪಡೆದಿದ್ದಾರೆ.ಇದನ್ನೂ ಓದಿ: ಕರ್ನಾಟಕ ಕಬಡ್ಡಿ ಇತಿಹಾಸದಲ್ಲಿ ಹೊಸ ಅಧ್ಯಾಯ – ಕೆಕೆಪಿಎಲ್ ಆಟಗಾರರ ಹರಾಜು ಯಶಸ್ವಿ
