ಬೆಂಗಳೂರು: ಕನ್ನಡ ಒಕ್ಕೂಟ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ (Karnataka Bandh) ಕರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ (Mandya) ಮತ್ತು ರಾಮನಗರ (Ramangara) ಭಾಗಗಳಲ್ಲಿ ವಿವಿಧ ವಿಶಿಷ್ಟ ಪ್ರತಿಭಟನೆಗಳು ಹಾಗೂ ರಸ್ತೆ ತಡೆಗಳು ವರದಿಯಾಗಿದ್ದರೆ, ಮೈಸೂರು, ಹಾಸನ, ಬೆಳಗಾವಿ ಸೇರಿದಂತೆ ಹೆಚ್ಚಿನ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಡ್ಯ:
ಮಂಡ್ಯ ನಗರದಲ್ಲಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಗರದ ಪ್ರಮುಖ ವಹಿವಾಟು ಕೇಂದ್ರವಾಗಿರುವ ಪೇಟೆ ಬೀದಿಯ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ವರ್ತಕರು ಬೆಂಬಲ ಸೂಚಿಸಿದರು.
‘ಕನ್ನಡ ಸೇನೆ’ಯ ಕಾರ್ಯಕರ್ತರು ನಗರದ ಸಂಜಯ್ ವೃತ್ತದಲ್ಲಿ ಖಾಲಿ ಮಡಿಕೆ ಹಾಗೂ ಹುರುಳಿ ಕಾಳು ಹಿಡಿದು “ಖಾಲಿ ಕೊಡ ಭಾಗ್ಯ ಕೊಟ್ಟ ಸರ್ಕಾರ” ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿ ‘ಖಾಲಿ ಮಡಿಕೆ ಚಳವಳಿ’ ನಡೆಸಿದರು. ಸಾರ್ವಜನಿಕರು ಹಾಗೂ ವರ್ತಕರಲ್ಲಿ ಬಂದ್‌ಗೆ ಬೆಂಬಲ ಕೋರಿ ಕನ್ನಡಪರ ಕಾರ್ಯಕರ್ತರು ನಗರಾದ್ಯಂತ ಬೈಕ್ ರ‍್ಯಾಲಿ ನಡೆಸಿದರು. ಇದನ್ನೂ ಓದಿ: ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ – ಎಂದಿನಂತೆ ಬಸ್ ಸಂಚಾರ
ರಾಮನಗರ
ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದ ಕನ್ನಡಪರ ಹೋರಾಟಗಾರರು ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು. ರಾಮನಗರದ ಪ್ರಮುಖ ಐಜೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಖಾಲಿ ಬಿಂದಿಗೆಗಳನ್ನು ಹಿಡಿದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಂದ್‌ಗೆ ನಿರೀಕ್ಷಿತ ಮಟ್ಟದ ಬೆಂಬಲ ವ್ಯಕ್ತವಾಗಿಲ್ಲ. ಕೆಎಸ್‌ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಿದ್ದು, ಸಾರ್ವಜನಿಕ ಓಡಾಟಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ನಗರದಲ್ಲಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಗಳ ಪ್ರಮುಖ ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದರು.
ಹಾಸನ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ಹಾಗೂ ಸಾರ್ವಜನಿಕ ಜನಜೀವನ ಎಂದಿನಂತಿತ್ತು. ದಾವಣಗೆರೆಯಲ್ಲಿ ಬಂದ್ ಪ್ರಭಾವ ಕಂಡುಬರದೆ, ಪ್ರತಿಭಟನೆ ಕೇವಲ ಸಾಂಕೇತಿಕ ಧರಣಿಗೆ ಸೀಮಿತವಾಗಿತ್ತು. ಬೆಳಗಾವಿಯಿಂದ ರಾಜ್ಯದ ಹಾಗೂ ನೆರೆ ರಾಜ್ಯದ ಇತರ ಭಾಗಗಳಿಗೆ ಬಸ್‌ಗಳ ಸಂಚಾರ ಸುಸೂತ್ರವಾಗಿ ನಡೆಯಿತು. ಚಿತ್ರದುರ್ಗದಲ್ಲಿ ಸ್ಥಳೀಯ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡದಿರುವುದರಿಂದ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.

