ಬಾಕ್ಸ್ ಆಫೀಸಿನಲ್ಲಿ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಬಗ್ಗೆ ಕಮಲ್ ಹಾಸನ್ (Kamal Haasan) ಮಾತನಾಡಿದ್ದಾರೆ. ಅದೊಂದು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದಾರೆ. ಸತ್ಯವನ್ನು ಹೇಳದೇ ಅಸತ್ಯವನ್ನೇ ತುಂಬಿರುವಂತಹ ಚಿತ್ರವದು ಎಂದು ಮಾತನಾಡಿದ್ದಾರೆ.
ಸದ್ಯ ಕಮಲ್ ಹಾಸನ್ ಅಬುಧಾಬಿಯಲ್ಲಿ ನಡೆಯುತ್ತಿರುವ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ಈಗಾಗಲೇ ಹಲವರು ವಾದ ಮಾಡಿದ್ದಾರೆ. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿತು. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್ಗೆ ಸಿಕ್ತು ಸಿಹಿಸುದ್ದಿ
ದಿ ಕೇರಳ ಸ್ಟೋರಿಯ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಒಟ್ಟು 32 ಸಾವಿರ ಯುವತಿಯರ ಮತಾಂತರ ಮಾಡಲಾಗಿದೆ ಎಂದು ಹೇಳಿತ್ತು. ಅಂಕಿ ಸಂಖ್ಯೆಯ ಕುರಿತು ವ್ಯಾಪಕ ಟೀಕೆ ಬಂದ ಬೆನ್ನಲ್ಲೇ ಸಂಖ್ಯೆಯ ವಿಚಾರವನ್ನು ಸಿನಿಮಾದಿಂದಲೇ ಕೈ ಬಿಡಲಾಯಿತು. ಆದರೆ, ಸಾಕಷ್ಟು ಸಂಖ್ಯೆಲ್ಲಿ ಮತಾಂತರ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಎರಡು ದಿನಗಳ ಹಿಂದೆ ನಡೆದ ಮಾಧ್ಯಮ ಗೋಷ್ಠಿಗೆ 26 ಯುವತಿಯರನ್ನು ಕರೆತಂದಿದ್ದರು ನಿರ್ದೇಶಕ ಸುದೀಪ್ತೋ ಸೇನ್.
ಸಂತ್ರಸ್ತೆ (Victim) ಯುವತಿಯೊಬ್ಬಳು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ , ‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ (Adah Sharma) ಮಾಡಿದ ಪಾತ್ರಕ್ಕೂ ನನ್ನ ಜೀವನಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಅದಾ ಶರ್ಮಾ ಮಾಡಿದ ಪಾತ್ರ ನೂರಕ್ಕೂ ನೂರು ನನ್ನನ್ನೇ ಹೋಲುತ್ತದೆ. ಮನೆಯಲ್ಲಿ ಕೆಳಗೆ ಪೂಜೆ ನಡೆಯುತ್ತಿದ್ದರೆ, ಟೆರೇಸ್ ಮೇಲೆ ನಾನು ನಮಾಜ್ ಮಾಡುತ್ತಿದ್ದೆ. ಅಷ್ಟರ ಮಟ್ಟಿಗೆ ಪರಿವರ್ತನೆ ಮಾಡಿದ್ದರು’ ಎಂದು ಹೇಳಿಕೊಂಡರು.