-ಯುಗೆ ಯುಗೀನ್ ಭಾರತ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ 3,230 ಕೋಟಿ ರೂ.
-ನೋಯ್ಡಾ-ಗ್ರೇಟರ್ ನೋಯ್ಡಾ ಮೆಟ್ರೋ ವಿಸ್ತರಣೆಗೆ 2,390 ಕೋಟಿ ರೂ.
-ಹಿಂಗಾರು ಹಂಗಾಮಿನ ರಸಗೊಬ್ಬರ ಸಬ್ಸಿಡಿಗೆ 62,370 ಕೋಟಿ ರೂ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಐದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು 77,101 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ದೇಶದ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ, ನಗರ ಸಾರಿಗೆ ವ್ಯವಸ್ಥೆ ಸುಧಾರಣೆ, ರೈತರಿಗೆ ರಸಗೊಬ್ಬರ ಸಬ್ಸಿಡಿ ಹಾಗೂ ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ದೆಹಲಿಯ (Dehli) ಐತಿಹಾಸಿಕ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಟ್ಟಡಗಳನ್ನು ಮರುಬಳಕೆ ಮಾಡಿಕೊಂಡು `ಯುಗೆ ಯುಗೀನ್ ಭಾರತ’ ವಸ್ತುಸಂಗ್ರಹಾಲಯ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ 3,230 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದೆ. ಒಂದು ಲಕ್ಷ ಚದರ ಮೀಟರ್ಗಿಂತಲೂ ಹೆಚ್ಚು ಪ್ರದರ್ಶನ ಸ್ಥಳ ಹೊಂದಲಿರುವ ಈ ವಸ್ತುಸಂಗ್ರಹಾಲಯವು ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗುವ ಉದ್ದೇಶ ಹೊಂದಿದೆ. ಭಾರತದ ನಾಗರಿಕತೆಯ ನಿರಂತರತೆ, ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ದಿನಕ್ಕೆ 30 ಸಾವಿರ ಹಾಗೂ ವರ್ಷಕ್ಕೆ ಒಂದು ಕೋಟಿ ಪ್ರವಾಸಿಗರಿಗೆ ಭೇಟಿ ನೀಡುವ ವ್ಯವಸ್ಥೆ ಕಲ್ಪಿಸುವ ಯೋಜನೆಯಿದೆ. ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ವರ್ಚುವಲ್ ರಿಯಾಲಿಟಿ ಅನುಭವಗಳೂ ಇರಲಿವೆ. ಇದನ್ನೂ ಓದಿ: ನಮ್ಮ ಮೆಟ್ರೋದ 100 ಕಿ.ಮೀ ಮೈಲಿಗಲ್ಲು – ನ.13ರಂದು 7.5 ಕಿ.ಮೀ ಪಿಂಕ್ ಲೈನ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಇನ್ನು ಉತ್ತರ ಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಡುವಿನ ಮೆಟ್ರೋ ಸಂಪರ್ಕ ವಿಸ್ತರಣೆಗೆ 2,390 ಕೋಟಿ ರೂ. ಅನುಮೋದನೆ ನೀಡಲಾಗಿದೆ. ನೋಯ್ಡಾ ಸೆಕ್ಟರ್ 51ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್ 4ರವರೆಗೆ 8.5 ಕಿ.ಮೀ. ಉದ್ದದ ಎತ್ತರಿಸಿದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಐದು ಹೊಸ ನಿಲ್ದಾಣಗಳು ಬರಲಿದ್ದು, ನಾಲ್ಕು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪಶ್ಚಿಮ ಭಾಗದ ಜನರಿಗೆ ದೆಹಲಿ ಮೆಟ್ರೋ ಸಂಪರ್ಕ ಸುಲಭವಾಗಲಿದೆ.
As Noida and Greater Noida grow, why should daily commutes become longer?
Here is some good news for the people of Noida and Greater Noida!
The Cabinet has approved an extension of the Aqua Line Metro.
Key advantages:
Easier access to offices, schools, hospitals and commercial hubs.
Less congestion.
Shorter commutes.
A major boost to connectivity and Ease of Living indeed.
https://t.co/GEarCYPUce
— Narendra Modi (@narendramodi) November 11, 2026
ಹಿಂಗಾರು ಹಂಗಾಮು 2026-27ಕ್ಕೆ ರಸಗೊಬ್ಬರ ಸಬ್ಸಿಡಿ ನೀಡಲು 62,370 ಕೋಟಿ ರೂ. ಅನುದಾನಕ್ಕೆ ಸಂಪುಟ ಅನುಮೋದನೆ ನೀಡಿದೆ. ಹಿಂದಿನ ರಬಿ ಹಂಗಾಮಿನಲ್ಲಿ 37,952 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ ಶೇ.64ರಷ್ಟು ಹೆಚ್ಚಳವಾಗಿದೆ. ಡಿಎಪಿ ರಸಗೊಬ್ಬರದ 50 ಕೆ.ಜಿ. ಚೀಲಕ್ಕೆ 1,350 ರೂ. ನಿಗದಿತ ಬೆಲೆಯಲ್ಲಿ ಲಭ್ಯತೆ ಮುಂದುವರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಅಗತ್ಯ ರಸಗೊಬ್ಬರ ಸಕಾಲದಲ್ಲಿ ಲಭ್ಯವಾಗುವಂತೆ ಮಾಡುವುದರ ಜೊತೆಗೆ ದೇಶೀಯ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನೂ ಈ ಪ್ಯಾಕೇಜ್ ಹೊಂದಿದೆ.ಇದನ್ನೂ ಓದಿ: ಟಾಸ್ಕ್ ಮತ್ತೆ ರದ್ದು; ಉಸ್ತುವಾರಿ ಮಂಜ ವಿರುದ್ಧ ಸ್ಪರ್ಧಿಗಳು ಗರಂ
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ಸಾಲ ಖಾತರಿ ನಿಧಿಯನ್ನು ಮುಂದಿನ ಐದು ವರ್ಷಗಳವರೆಗೆ ಮುಂದುವರಿಸಲು 5,000 ಕೋಟಿ ರೂ. ಅನುಮೋದಿಸಲಾಗಿದೆ. ಈ ಯೋಜನೆಯಡಿ 20 ಲಕ್ಷ ರೂ.ವರೆಗಿನ ಸಾಲಗಳಿಗೆ ಖಾತರಿ ಒದಗಿಸಲಾಗುತ್ತದೆ. ಇದರಿಂದ ಸುಮಾರು 12.60 ಲಕ್ಷ ಕೋಟಿ ರೂ. ಮೌಲ್ಯದ ಮುದ್ರಾ ಸಾಲಗಳಿಗೆ ಬೆಂಬಲ ದೊರೆಯುವ ನಿರೀಕ್ಷೆಯಿದೆ. ಸಾಲ ಖಾತರಿ ಶುಲ್ಕವನ್ನು ಶೇ.1ರಿಂದ ಶೇ.0.75ಕ್ಕೆ ಇಳಿಸಲಾಗಿದೆ.
ಇದೇ ವೇಳೆ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೆರವಾಗುವ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಸಾಲ ಖಾತರಿ ನಿಧಿಯನ್ನು ಐದು ವರ್ಷಗಳವರೆಗೆ ಮುಂದುವರಿಸಲು 4,111 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ಹೊಸ ಉದ್ಯಮ ಆರಂಭಿಸುವವರಿಗೆ 10 ಲಕ್ಷದಿಂದ ಒಂದು ಕೋಟಿ ರೂ.ವರೆಗಿನ ಸಾಲಗಳಿಗೆ ಖಾತರಿ ಒದಗಿಸಲಾಗುತ್ತದೆ.ಇದನ್ನೂ ಓದಿ: ಪಂಜಾಬ್ನಲ್ಲಿ ಫ್ಲೈಓವರ್ ಗೋಡೆಗೆ ಡಿಕ್ಕಿ ಹೊಡೆದ ಬಸ್ – 3 ಮಂದಿ ಸಾವು, 24 ಜನರಿಗೆ ಗಾಯ
