ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ 36 ಸಾವಿರ ಮತಗಳ ಅಂತರದಿಂದ ಸೋತರು ಅಂತಾ ಅವರನ್ನೇ ಪ್ರಶ್ನಿಸಿ ಎಂದು ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಗೆಲುವಿನ ಅಂತರ ಯಾಕೆ ಕಡಿಮೆ ಆಯ್ತು ಅಂತಾ ಪ್ರಶ್ನಿಸುವ ಮಾಧ್ಯಮಗಳು ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಸೋತಿದ್ದು ಯಾಕೆ? ಅವರನ್ನು ಈ ವಿಚಾರದಲ್ಲಿ ಪ್ರಶ್ನೆ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
Advertisement
Advertisement
ನೀವು ಈ ಪ್ರಶ್ನೆಯನ್ನು ಅವರಿಗೆ ಕೇಳಿ. ನಾನೇ ಕೇಳಿದೆ ಅಂತಾನೆ ಹೇಳಿ ಸಿದ್ದರಾಮಯ್ಯಗೆ ಪ್ರಶ್ನಿಸಿ. ಅವರ 5 ವರ್ಷದ ಆಡಳಿತದ ಫಲವೇ ಈ ದೊಡ್ಡ ಅಂತರ ಅಥವಾ ಅವರ ನಡವಳಿಕೆ ಫಲವಾಗಿ ಈ ಅಂತರ ಬಂದಿದೆಯಾ ಅನ್ನುವುದು ಚರ್ಚೆ ಆಗಲಿ. ಅವರ ಸೋಲಿನ ಅಂತರದ ಬಗ್ಗೆ ಒಂದು ವಿಮರ್ಶೆ ನಡೆಯಲಿ ಎಂದು ವಿಶ್ವನಾಥ್ ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯರ ವಿರುದ್ಧ ಶಾಸಕ ವಿಶ್ವನಾಥ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.
Advertisement
ರೈತರ ಸಂಪೂರ್ಣ ಸಾಲ ಮನ್ನಾ ವಿಚಾರದ ಕುರಿತು ಮಾತನಾಡಿದ ಅವರು. ಇದೀಗ ನಮಗೆ ಪೂರ್ಣ ಬಹುಮತ ಇಲ್ಲ. ಹಾಗಾಗಿ ಒಂದು ವಾರ ಅವಕಾಶ ಕೊಡಿ ಎಂದಿದ್ದರು ಕುಮಾರಸ್ವಾಮಿ. ಆದರೂ ಬಿಜೆಪಿ ಬಂದ್ ಮಾಡಿದೆ. ಎಚ್‍ಡಿಕೆ ಕೇಳಿರುವುದು ಒಂದು ವಾರ ಮಾತ್ರ ಕಾಲವಕಾಶ ಹೊರತು ಒಂದು ತಿಂಗಳ ಕಾಲಾವಕಾಶ ಕೇಳಿಲ್ಲ. ಯಾವುದೇ ಕಾರಣಕ್ಕೂ ಸಾಲಮನ್ನಾದಿಂದ ಕುಮಾರಸ್ವಾಮಿ ಹಿಂದೆ ಸರಿಯಲ್ಲ ಎಂದರು.
Advertisement
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ನ ಜಿಟಿ ದೇವೇಗೌಡ ಅವರು 36,042 ಮತಗಳ ಅಂತರದಿಂದ ಸಿದ್ದರಾಮಯ್ಯನವರನ್ನು ಸೋಲಿಸಿದ್ದರೆ, ಕೃಷ್ಣರಾಜನಗರದಲ್ಲಿ ಸಾ.ರಾ.ಮಹೇಶ್ 1,779 ಮತಗಳ ಅಂತರದಿಂದ ಕಾಂಗ್ರೆಸ್‍ನ ಡಾ. ರವಿಶಂಕರ್ ಅವರನ್ನು ಮಣಿಸಿದ್ದರು. 2013ರಲ್ಲಿ 15,052 ಮತಗಳ ಅಂತರದಿಂದ ಸಾ.ರಾ. ಮಹೇಶ್ ಜಯಗಳಿಸಿದ್ದರು.