ನವದೆಹಲಿ: ಭಾರತದಿಂದ (India) ರಫ್ತಾಗುತ್ತಿದ್ದ ಮಾವಿನ ಹಣ್ಣುಗಳಿಗೆ (Mango) ಜಪಾನ್ (Japan)ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಸುಮಾರು 20 ವರ್ಷಗಳ ಬಳಿಕ ಜಪಾನ್ ಈ ನಿರ್ಧಾರ ತೆಗೆದುಕೊಂಡಿದ್ದು, ಭಾರತೀಯ ಮಾವಿನ ಹಣ್ಣಿನ ರಫ್ತುದಾರರಿಗೆ ದೊಡ್ಡ ಹೊಡೆತ ಬಿದ್ದಿದೆ.
ಜಪಾನ್ ಅಧಿಕಾರಿಗಳು ಭಾರತದಲ್ಲಿನ ಮಾವಿನ ಹಣ್ಣು ಸಂಸ್ಕರಣಾ ಕೇಂದ್ರಗಳನ್ನು ಪರಿಶೀಲಿಸಿದ ವೇಳೆ ಕೀಟ ನಿಯಂತ್ರಣ ಕ್ರಮಗಳಲ್ಲಿ ಲೋಪ ಕಂಡುಬಂದಿದೆ ಎಂದು ವರದಿಯಾಗಿದೆ.
ಜಪಾನ್‌ನಲ್ಲಿ ಕೃಷಿಗೆ ಹಾನಿ ಉಂಟುಮಾಡುವ ಕೀಟಗಳ ವಿರುದ್ಧ ಜೀರೋ ಟಾಲರೆನ್ಸ್ ನೀತಿ ಜಾರಿಯಲ್ಲಿದೆ. ಹೀಗಾಗಿ ಅಲ್ಪ ಪ್ರಮಾಣದ ಸಮಸ್ಯೆಯನ್ನು ಸಹ ಅಲ್ಲಿನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಾರೆ. ಇದನ್ನೂ ಓದಿ: ಬಕ್ರೀದ್‌ಗೆ ಬಲಿ ಕೊಡಲು ಖರೀದಿಸಿದ್ದ ಟ್ರಂಪ್ ಹೋಲುವ ಎಮ್ಮೆ ಮೃಗಾಲಯಕ್ಕೆ ಶಿಫ್ಟ್
ಈ ಬಾರಿ ಉತ್ತರ ಪ್ರದೇಶದ ರೆಹಮಾನ್‌ಪುರದಲ್ಲಿರುವ ವ್ಯಾಪರ್ ಹೀಟ್ ಟ್ರೀಟ್‌ಮೆಂಟ್(ವಿಹೆಚ್‌ಟಿ) ಕೇಂದ್ರವನ್ನು ಜಪಾನ್ ತಂಡ ಮಾರ್ಚ್ ತಿಂಗಳಲ್ಲಿ ಪರಿಶೀಲಿಸಿತ್ತು. ಈ ಕೇಂದ್ರದಲ್ಲಿ ಮಾವಿನ ಹಣ್ಣುಗಳನ್ನು ಬಿಸಿ ಹಾಗೂ ತೇವಾಂಶ ಇರುವ ಗಾಳಿಯ ಮೂಲಕ ನೈಸರ್ಗಿಕವಾಗಿ ಕೀಟಮುಕ್ತಗೊಳಿಸಲಾಗುತ್ತದೆ. ಜಪಾನ್‌ಗೆ ಹಣ್ಣುಗಳನ್ನು ರಫ್ತು ಮಾಡುವ ಮುನ್ನ ಈ ಪ್ರಕ್ರಿಯೆ ಕಡ್ಡಾಯವಾಗಿದೆ.

ಆದರೆ ಪರಿಶೀಲನೆ ವೇಳೆ ಕೀಟನಾಶಕಗಳನ್ನು ಬಳಸುವ ಕ್ರಮಗಳಲ್ಲಿ ಕೆಲ ಕೊರತೆಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಬಳಿಕ 2026ರ ಮಾರ್ಚ್ 25 ರ ನಂತರ ಭಾರತೀಯ ಮಾವಿನ ಹಣ್ಣುಗಳನ್ನು ಸ್ವೀಕರಿಸುವುದಿಲ್ಲ ಎಂದು ಜಪಾನ್ ತಿಳಿಸಿದೆ.
ಈ ನಿರ್ಧಾರದಿಂದ ಅಲ್ಫೋನ್ಸೋ, ಕೇಸರ್, ಲಂಗ್ರಾ ಹಾಗೂ ಬಂಗನಪಲ್ಲಿ ಸೇರಿದಂತೆ ಭಾರತದ ಪ್ರೀಮಿಯಂ ಮಾವಿನ ತಳಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಜಪಾನ್ ಭಾರತದ ಅತಿ ದೊಡ್ಡ ಆಮದು ಮಾರುಕಟ್ಟೆ ಅಲ್ಲದಿದ್ದರೂ, ಅಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿತ್ತು.
ಭಾರತ ಪ್ರಪಂಚದಲ್ಲೇ ಅತಿ ಹೆಚ್ಚು ಮಾವು ಉತ್ಪಾದಿಸುವ ದೇಶವಾಗಿದೆ. ಪ್ರತಿವರ್ಷ ಸುಮಾರು 28 ಮಿಲಿಯನ್ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ ಈ ವರ್ಷ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಹಾಗೂ ಎಲ್ ನಿನೋ ಪರಿಣಾಮದಿಂದ ಬೆಳೆ ನಷ್ಟ ಉಂಟಾಗಿದೆ.
ಕೆಲವು ಪ್ರದೇಶಗಳಲ್ಲಿ 85 ರಿಂದ 90% ತನಕ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿದೆ. ಇಂತಹ ಸಂಕಷ್ಟದ ನಡುವೆಯೇ ಜಪಾನ್‌ನ ನಿರ್ಬಂಧ ಭಾರತೀಯ ರೈತರು ಹಾಗೂ ರಫ್ತುದಾರರ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತದ ವಿದ್ಯಾರ್ಥಿನಿಗೆ ಚಾಕು ಇರಿದು ಹತ್ಯೆ
