ಒಟ್ಟಾವಾ: ಕೆನಡಾದ (Canada) ನಯಾಗ್ರಾದಲ್ಲಿ ಗುಜರಾತ್ (Gujarat) ಮೂಲದ ವಿದ್ಯಾರ್ಥಿನಿಯನ್ನು (Student) ದುಷ್ಕರ್ಮಿಯೊಬ್ಬ ಚಾಕು ಇರಿದು ಹತ್ಯೆ ಮಾಡಿದ್ದಾನೆ.
ಕೊಲೆಯಾದ ಯುವತಿಯನ್ನು ವಿಧಿ ಮೇಘಾ (22) ಎಂದು ಗುರುತಿಸಲಾಗಿದೆ. ಗುಜರಾತ್‌ನ ಆಳಂದ ಜಿಲ್ಲೆಯ ಬೊರ್ಸಾದ್ ಮೂಲದ ವಿಧಿ ಮೇಘಾ ಕಳೆದ ನಾಲ್ಕು ವರ್ಷಗಳಿಂದ ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಳು. ವಿದ್ಯಾಭ್ಯಾಸದೊಂದಿಗೆ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದಳು.
ವಿಧಿ ಮೇಘಾ ಎಂದಿನಂತೆ ಕೆಲಸಕ್ಕೆ ಹೊರಟಿದ್ದ ಸಮಯದಲ್ಲಿ ದುಷ್ಕರ್ಮಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಪ್ರೇಯಸಿ ಮನೆಗೆ ಹೋಗಿ ಪತಿಗೆ ಸಿಕ್ಕಿಬಿದ್ದ ಯುವಕನ ಬರ್ಬರ ಹತ್ಯೆ
ಪ್ರಾಥಮಿಕ ತನಿಖೆ ಪ್ರಕಾರ, ದರೋಡೆ ಯತ್ನದ ವೇಳೆ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬAಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಆದರೆ ಹತ್ಯೆಯ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಮೇ 16ರಿಂದ ವಿಧಿ ಕುಟುಂಬದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಕೆ ಓದು ಮತ್ತು ಕೆಲಸದಲ್ಲಿ ಬ್ಯುಸಿಯಾಗಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಬಳಿಕ ಕೆನಡಾ ಅಧಿಕಾರಿಗಳ ಮೂಲಕ ಕುಟುಂಬಕ್ಕೆ ವಿಧಿ ಸಾವಿನ ಮಾಹಿತಿ ದೊರೆತಿದೆ.
ಈ ಘಟನೆ ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮತ್ತೆ ಆತಂಕ ಹುಟ್ಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತೀಯ ಮೂಲದವರ ಮೇಲೆ ದಾಳಿ, ದರೋಡೆ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಕೆನಡಾ ಪೊಲೀಸರು ಬಂಧಿತ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಸಿಗಂದೂರು ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು
