ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ (IPL 2026) ಟೂರ್ನಿ ಕೊನೇ ಘಟ್ಟ ತಲುಪಿದೆ. ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 7:30 ಗಂಟೆಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಆರ್‌ಸಿಬಿ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮಧ್ಯೆ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಸಿಗುವ ಬಹುಮಾನ ಮೊತ್ತದ (IPL Prize Money) ವಿವರ ಇಲ್ಲಿದೆ.
ಇದುವರೆಗೆ ಆರ್‌ಸಿಬಿ ಮತ್ತು ಗುಜರಾತ್ (RCB vs GT) ಎರಡೂ ತಂಡಗಳು ತಲಾ ಒಂದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿವೆ. ಹೀಗಾಗಿ ಈ ಬಾರಿಯ ಫೈನಲ್‌ನಲ್ಲಿ ಗೆಲ್ಲುವ ತಂಡ ತನ್ನ ಎರಡನೇ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ. ಇದನ್ನೂ ಓದಿ: RCB Vs GT Final – ಈ ಸಲ ಕಪ್ ನಮ್ದಾ, ನಿಮ್ದಾ? ಮೋದಿ ಅಂಗಳದಲ್ಲಿ ರನ್ ಹೊಳೆ ಹರಿಯುತ್ತಾ?

ಚಾಂಪಿಯನ್ ತಂಡಕ್ಕೆ 20 ರೂ. ಕೋಟಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2026ರ ಬಹುಮಾನ ಮೊತ್ತಕ್ಕಾಗಿ 46.5 ಕೋಟಿ ರೂ.ಗಿಂತ ಹೆಚ್ಚು ಹಣ ಮೀಸಲಿಟ್ಟಿದೆ. ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ರೂ. ಬಹುಮಾನ ದೊರೆಯಲಿದೆ.
ರನ್ನರ್-ಅಪ್‌ಗೆ 13 ಕೋಟಿ ರೂ.
ಫೈನಲ್‌ನಲ್ಲಿ ಸೋಲುವ ತಂಡಕ್ಕೂ ದೊಡ್ಡ ಮೊತ್ತದ ಬಹುಮಾನ ಸಿಗಲಿದೆ. ರನ್ನರ್-ಅಪ್ ತಂಡಕ್ಕೆ 13 ರೂ. ಕೋಟಿ ನೀಡಲಾಗುತ್ತದೆ. ಇದನ್ನೂ ಓದಿ: ಈ ವಯಸ್ಸಲ್ಲಿ ನನಗೆ ಚಿನ್ನಿದಾಂಡು ಆಡೋಕೂ ಬರುತ್ತಿರಲಿಲ್ಲ: ಸೂರ್ಯವಂಶಿಯನ್ನು ಹೊಗಳಿದ ಅಮಿತಾಬ್ ಬಚ್ಚನ್
ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆಯುವ ತಂಡಕ್ಕೆ 7 ಕೋಟಿ ರೂ., 4ನೇ ಸ್ಥಾನದಲ್ಲಿರುವ ತಂಡಕ್ಕೆ 6.5 ಕೋಟಿ ರೂ. ನೀಡಲಾಗುತ್ತದೆ.

ಐಪಿಎಲ್ ಬಹುಮಾನ ಮೊತ್ತದ ಇತಿಹಾಸ
2008 ಮತ್ತು 2009ರಲ್ಲಿ ಐಪಿಎಲ್ ಚಾಂಪಿಯನ್ ತಂಡಕ್ಕೆ 4.8 ಕೋಟಿ ರೂ. ನೀಡಲಾಗುತ್ತಿತ್ತು. ಬಳಿಕ ಬಹುಮಾನ ಮೊತ್ತ ಕ್ರಮೇಣ ಹೆಚ್ಚಳವಾಗಿದ್ದು, ಈಗ 20 ಕೋಟಿ ರೂ.ಗೆ ಏರಿಕೆಯಾಗಿದೆ. ಕೋವಿಡ್ ಪರಿಣಾಮದಿಂದ 2020ರಲ್ಲಿ ಮಾತ್ರ ಬಹುಮಾನ ಮೊತ್ತ 10 ಕೋಟಿ ರೂ.ಗೆ ಇಳಿಸಲಾಗಿತ್ತು.
ಟಾಪ್-4ಗಿಂತ ಕೆಳಗಿರುವ ತಂಡಗಳಿಗೆ ಬಹುಮಾನ ಇಲ್ಲ
ಐದನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗೆ ಇರುವ ತಂಡಗಳಿಗೆ ಅಧಿಕೃತ ಬಹುಮಾನ ಹಣ ನೀಡುವುದಿಲ್ಲ. ಆದರೆ ಪ್ರಾಯೋಜಕತ್ವ, ಟಿಕೆಟ್ ಮಾರಾಟ ಮತ್ತು ಪ್ರಸಾರ ಹಕ್ಕುಗಳ ಮೂಲಕ ಆದಾಯ ಗಳಿಸುತ್ತವೆ.

ಬಹುಮಾನ ಹಂಚಿಕೆ ಹೇಗೆ?
ಐಪಿಎಲ್ ನಿಯಮಗಳ ಪ್ರಕಾರ, ತಂಡಕ್ಕೆ ಸಿಗುವ ಬಹುಮಾನ ಮೊತ್ತದ 50% ಆಟಗಾರರಿಗೆ ಹಂಚಲಾಗುತ್ತದೆ. ಉಳಿದ 50% ಫ್ರಾಂಚೈಸಿ ಮಾಲೀಕರಿಗೆ ಸೇರುತ್ತದೆ. ಇದನ್ನೂ ಓದಿ: RCB vs GT ಫೈನಲ್ ಫೈಟ್ – ಮಳೆಯಿಂದ ಇಂದು ಪಂದ್ಯ ರದ್ದಾದ್ರೆ ಮುಂದೇನು?
ವೈಯಕ್ತಿಕ ಪ್ರಶಸ್ತಿಗಳಿಗೂ ನಗದು ಬಹುಮಾನ
ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿದಂತೆ ವೈಯಕ್ತಿಕ ಪ್ರಶಸ್ತಿಗಳನ್ನು ಗೆಲ್ಲುವ ಆಟಗಾರರು ಹೆಚ್ಚುವರಿ ನಗದು ಬಹುಮಾನ ಪಡೆಯುತ್ತಾರೆ. ಇಂತಹ ಪ್ರಶಸ್ತಿಗಳ ಮೂಲಕ ಸುಮಾರು 1 ಕೋಟಿ ರೂ.ವರೆಗೆ ಹೆಚ್ಚುವರಿ ಮೊತ್ತ ಸಿಗುವ ಅವಕಾಶವಿದೆ.
