ಮುಂಬೈ: ಸಂಜು ಸ್ಯಾಮ್ಸನ್(Sanju Samson) ಅವರ ಎರಡನೇ ಸ್ಫೋಟಕ ಶತಕ ಮತ್ತು ಹೊಸೈನ್ (Akeal Hosein) ಅವರ ಸ್ಪಿನ್ ಕೈಚಳಕದ ನೆರವಿನಿಂದ ತವರಿನಲ್ಲೇ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) 103 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಮುಂಬೈ 19 ಓವರ್‌ಗಳನ್ನು 104 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಟೂರ್ನಿಯಲ್ಲಿ ಐದನೇ ಸೋಲು ಕಂಡಿತು.
ಈ ಪಂದ್ಯಕ್ಕೂ ಮೊದಲು ಚೆನ್ನೈ 8ನೇ ಸ್ಥಾನದಲ್ಲಿತ್ತು. ಇಂದಿನ ಭರ್ಜರಿ ಜಯದಿಂದಾಗಿ ಚೆನ್ನೈ ನೆಟ್ ರನ್ ರೇಟ್ 0.118 ಕ್ಕೆ ಏರಿದ್ದರಿಂದ 5ನೇ ಸ್ಥಾನಕ್ಕೆ ಜಿಗಿದಿದೆ. 7ನೇ ಸ್ಥಾನದಲ್ಲಿದ್ದ ಮುಂಬೈ 4 ಅಂಕಗಳೊಂದಿಗೆ 8ನೇ ಸ್ಥಾನಕ್ಕೆ ಜಾರಿದೆ.
ಮುಂಬೈ 11 ರನ್ ಗಳಿಸುವಷ್ಟರಲ್ಲೇ ಕ್ವಿಂಟಾನ್ ಡಿ ಕಾಕ್, ನಮನ್ ಧಿರ್, ನಿಶ್ ಮಾಲೆವಾರ್ ಅವರ ವಿಕೆಟ್ ಕಳೆದುಕೊಂಡಿತು. ಈ ಸಮಯದಲ್ಲಿ ನಾಲ್ಕನೇ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ 56 ಎಸೆತಗಳಲ್ಲಿ 73 ರನ್ ಜೊತೆಯಾಟವಾಡಿದರು.
84 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಮುಂಬೈ ನಂತರ 3 ರನ್ ಗಳಿಸುವಷ್ಟರಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರುದರ್‌ಪೋರ್ಡ್, ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕಳೆದಕೊಳ್ಳುವ ಮೂಲಕ ಸೋಲಿನತ್ತ ಮುಖಮಾಡಿತು.
ತಿಲಕ್ ವರ್ಮಾ 37 ರನ್(29 ಎಸೆತ, 5 ಬೌಂಡರಿ,)ಸೂರ್ಯಕುಮಾರ್ ಯಾದವ್ 35 ರನ್(30 ಎಸೆತ, 5 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ಚೆನ್ನೈ ಪರ ಹೊಸೈನ್ 4 ವಿಕೆಟ್, ನೂರ್ ಅಹ್ಮದ್ 2 ವಿಕೆಟ್ ಪಡೆದರು.
ಸ್ಯಾಮ್ಸನ್ 2ನೇ ಶತಕ:
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಈ ಟೂರ್ನಿಯಲ್ಲಿ ಎರಡನೇ ಶತಕ ಹೊಡೆದರು. ಮೊದಲ 26 ಎಸೆತಗಳಲ್ಲಿ ಫಿಫ್ಟಿ ಹೊಡೆದ ಸಮ್ಯಾನ್ಸ್ ನಂತರದ 28 ಎಸೆತಗಳಲ್ಲಿ ಶತಕ ಬಾರಿಸಿದರು. ಕೊನೆಯ ಎಸೆತದಲ್ಲಿ ಬೌಂಡರಿ ಹೊಡೆದ ಸ್ಯಾಮ್ಸನ್ ಅಜೇಯ 101 ರನ್(54 ಎಸೆತ, 10 ಬೌಂಡರಿ, 6 ಸಿಕ್ಸ್) ಸಿಡಿಸಿದರು. ಈ ಮೊದಲು ಡೆಲ್ಲಿ ವಿರುದ್ಧ ಚೆನ್ನೈ ನಡೆದ ಪಂದ್ಯದಲ್ಲಿ ಸ್ಯಾಮ್ಸನ್ ಅಜೇಯ 115 ರನ್(56 ಎಸೆತ, 15 ಬೌಂಡರಿ, 4 ಸಿಕ್ಸ್) ಚಚ್ಚಿದ್ದರು.
ಚೆನ್ನೈ ಪರ ನಾಯಕ ಋತುರಾಜ್ 22 ರನ್(14 ಎಸೆತ, 3 ಬೌಂಡರಿ, 1 ಸಿಕ್ಸ್) ಬ್ರೇವಿಸ್ 21 ರನ್, ಕಾರ್ತಿಕ್ ಶರ್ಮಾ 18 ರನ್, ಓವರ್‌ಟನ್ 15 ರನ್ ಹೊಡೆದು ಔಟಾದರು.



