ಕೋಲಾರ: ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷರ ಮನೆ ಮೇಲೆ ಲೋಕಾಯುಕ್ತ (Lokayukta) ದಾಳಿ ಮಾಡಿದ್ದ ಪ್ರಕರಣದ ತನಿಖಾ ವರದಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. 768 ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗಿದ್ದು, ಅಕ್ರಮದ ತನಿಖಾ ವರದಿಯನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಸರ್ವೇ ಸೂಪರ್ ವೈಸರ್ ಹಾಗೂ ಕೋಲಾರ (Kolar) ಮಾಜಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 435 ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತಹಶೀಲ್ದಾರ್, ಎಡಿಎಲ್‌ಆರ್, ಡಿಡಿಎಲ್‌ಆರ್ ನಕಲಿ ಸೀಲುಗಳು ಪತ್ತೆಯಾಗಿದ್ದವು. 128 ಮೂಲ ಸರ್ಕಾರಿ ದಾಖಲೆಗಳು ಸಿಕ್ಕಿದ್ದವು. ಮಂಜೂರಾತಿ ರಿಜಿಸ್ಟರ್, ಪಟ್ಟಾ ಪುಸ್ತಕ, ಖರ್ದಾ ರಿಜಿಸ್ಟರ್, ಪೋಡಿ ದಾಖಲೆಗಳು ಸಹ ಇಲ್ಲಿ ಪತ್ತೆಯಾಗಿದ್ದವು. ಇದನ್ನೂ ಓದಿ: ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಲು ಎಐ, ಫೇಶಿಯಲ್ ರೆಕಗ್ನಿಷನ್ ಮೊರೆ ಹೋದ ಪೊಲೀಸರು
ಸರ್ಕಾರಿ ಕಚೇರಿಯಲ್ಲಿ ಇರಬೇಕಾದ ದಾಖಲೆಗಳು ಸುರೇಶ್ ಬಾಬು ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದವು. ಇವುಗಳನ್ನು ಪರಿಶೀಲನೆ ನಡೆಸಿದಾಗ ಕೋಲಾರ ಹಾಗೂ ಮಾಲೂರು ತಾಲೂಕಿನ ಸುಮಾರು 485 ಎಕರೆ ಅಕ್ರಮ ಭೂ ಮಂಜೂರಾತಿ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಸರ್ಕಾರಕ್ಕೆ 768 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಪ್ಪಿತಸ್ಥರ ಮೇಲೆ ಕ್ರಮದ ಬಗ್ಗೆ ಚರ್ಚಿಸಲು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಆಗಸ್ಟ್ 21 ರಂದು ಬರುವಂತೆ ಲೋಕಾಯುಕ್ತ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಇದನ್ನೂ ಓದಿ: ಬಿಡದಿಗೆ ಹೊರಟಿದ್ದ ನೂರಾರು ರೈತರನ್ನ ಕೊಡಗಿನ ಗಡಿಭಾಗದಲ್ಲೇ ತಡೆದ ಪೊಲೀಸರು
