ನವದೆಹಲಿ: ಅಗರ್ತಲಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದನ್ನ (IndiGo Flight) ಮಧ್ಯ ಗಗನದಲ್ಲಿ ಹೊಗೆ ಎಚ್ಚರಿಕೆ ಸೂಚನೆ ಕಾಣಿಸಿಕೊಂಡ ಹಿನ್ನೆಲೆ ಲಕ್ನೋಗೆ (Lucknow) ಡೈವರ್ಟ್ ಮಾಡಿರುವ ಘಟನೆ ನಡೆದಿದೆ.
ಇಂಡಿಗೋ ವಿಮಾನದಲ್ಲಿ (ವಿಮಾನ ಸಂಖ್ಯೆ 6E6504) 103 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು. ವಿಮಾನದ ಕಾರ್ಗೋ ವಿಭಾಗದಲ್ಲಿ (ಸರಕು ವಿಭಾಗ) ಹೊಗೆ ಕಾಣಿಸಿಕೊಂಡ ಬಗ್ಗೆ ಎಚ್ಚರಿಕೆ ಸೂಚನೆ ಬಂದ ಹಿನ್ನೆಲೆ ತಕ್ಷಣವೇ ವಿಮಾನವನ್ನ ಲಕ್ನೋ ಏರ್ಪೋರ್ಟ್ನತ್ತ ತಿರುಗಿಸಲಾಯಿತು. ವಿಮಾನವು ಸಂಜೆ 6:29ಕ್ಕೆ ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ಸುರಕ್ಷಿತವಾಗಿ ಲ್ಯಾಂಡ್ ಆಯಿತು.

ಏರ್ಲೈನ್ ಮೂಲಗಳ ಪ್ರಕಾರ, ಹೊಗೆ ಎಚ್ಚರಿಕೆ ತಪ್ಪು ಸೂಚನೆಯಾಗಿತ್ತು (False Alarm) ಎಂದು ತಿಳಿದುಬಂದಿದೆ. ಈ ಕುರಿತು ಇಂಡಿಗೋ ಸಂಸ್ಥೆಯ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬರಬೇಕಿದೆ.
ದೋಹಾ-ಬೆಂಗಳೂರು ಇಂಡಿಗೋ ವಿಮಾನ ಮಸ್ಕತ್ಗೆ ಡೈವರ್ಟ್
ಇತ್ತೀಚೆಗೆ ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನ ಸಿಬ್ಬಂದಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಿ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದ ಹಿನ್ನೆಲೆ ಮಸ್ಕತ್ಗೆ ಡೈವರ್ಟ್ ಮಾಡಲಾಗಿತ್ತು.
6E1302 ಸಂಖ್ಯೆಯ ವಿಮಾನವು ಮಸ್ಕತ್ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಬಳಿಕ ಅನಾರೋಗ್ಯಕ್ಕೆ ಒಳಗಾದ ಸಿಬ್ಬಂದಿಗೆ ವೈದ್ಯಕೀಯ ತಂಡ ಚಿಕಿತ್ಸೆ ನೀಡಿತ್ತು. ಸದ್ಯ ಸಿಬ್ಬಂದಿಯ ಆರೋಗ್ಯ ಸುಧಾರಿಸಿದೆ ಎಂದು ಇಂಡಿಗೋ ತಿಳಿಸಿತ್ತು.

