ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಅವರ ವಿರುದ್ಧ ಹೊಸದಾಗಿ ಮಹಾಭಿಯೋಗ (Impeachment) ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.
ಕಾಂಗ್ರೆಸ್(Congress) ಈ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದು ಇಂಡಿಯಾ (INDIA) ಮೈತ್ರಿಕೂಟದ ಪಕ್ಷಗಳ ನಡುವೆ ಈ ಕುರಿತು ಒಮ್ಮತ ಮೂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಿರ್ಣಯಕ್ಕೆ ಸಂಬಂಧಿಸಿದ ನೋಟಿಸ್ ಅನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ವಾರವೇ ಸಂಸತ್ತಿನಲ್ಲಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣಾ ಆಯೋಗದ ಹಲವು ಆದೇಶ ಹಾಗೂ ನಿರ್ಧಾರಗಳಿಗೆ ಸಂಬಂಧಿಸಿದಂತೆ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತ ಆಕ್ಷೇಪಣೆಗಳನ್ನು ಎತ್ತಿದ್ದರು ಎಂದು ಮಾಧ್ಯಮ ವರದಿ ಪ್ರಕಟವಾದ ಬೆನ್ನಲ್ಲೇ ಪ್ರತಿಪಕ್ಷಗಳು ಈ ಕ್ರಮಕ್ಕೆ ಮುಂದಾಗಿವೆ.

ಆಯೋಗದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಮತ್ತು ಕಳೆದ ಒಂದು ವರ್ಷದಲ್ಲಿ ಎಸ್‌ಐಆರ್ (SIR) ಸೇರಿದಂತೆ ಕೈಗೊಂಡ ಎಲ್ಲಾ ನಿರ್ಧಾರಗಳನ್ನು ಒಮ್ಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ 48 ಗಂಟೆ ಗಡುವು – ದೇಶಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ `ಜಿರಳೆʼ ಪಾರ್ಟಿ
ಈ ಹಿಂದೆ ಸಹಿ ಮಾಡಿದ್ದ 73 ಸಂಸದರಲ್ಲಿ ಏಳು ಮಂದಿ ಈಗ ಬೇರೆ ಪಕ್ಷಗಳಿಗೆ ಪಕ್ಷಾಂತರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಸದನದ ಪ್ರಸ್ತುತ ಬಲಾಬಲ ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ಸೇರಿಸಿ ಹೊಸ ನೋಟಿಸ್ ಸಿದ್ಧಪಡಿಸಲಾಗುತ್ತಿದೆ. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಎರಡೂ ಸದನಗಳಲ್ಲಿ ನೀಡಲಾಗಿದ್ದ ನೋಟಿಸ್‌ಗಳನ್ನು ಏಪ್ರಿಲ್ 6 ರಂದು ರಾಜ್ಯಸಭಾ ಸಭಾಪತಿ ಮತ್ತು ಲೋಕಸಭಾ ಸ್ಪೀಕರ್ ತಿರಸ್ಕರಿಸಿದ್ದರು.
ಪದಚ್ಯುತಿ ಪ್ರಕ್ರಿಯೆ ಹೇಗೆ?
ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವಜಾಗೊಳಿಸುವ ನಿಯಮಗಳನ್ನೇ ಹೋಲುತ್ತದೆ. ಈ ಪ್ರಕ್ರಿಯೆಯನ್ನು ಆರಂಭಿಸಲು ಸಂಸತ್ತಿನಲ್ಲಿ ನಿಗದಿತ ಸಂಖ್ಯೆಯ ಸದಸ್ಯರ ಬೆಂಬಲ ಬೇಕಾಗುತ್ತದೆ. ನೋಟಿಸ್ ಅಂಗೀಕಾರವಾದರೆ ತನಿಖೆ ನಡೆಯಲಿದ್ದು, ಅಂತಿಮವಾಗಿ ಸಂಸತ್ತಿನಲ್ಲಿ ವಿಶೇಷ ಬಹುಮತದ ಮೂಲಕವಷ್ಟೇ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಾಧ್ಯ.

