– ಸಾಮಾನ್ಯ ಕಾರ್ಯಕರ್ತ ಸಿಎಂ ಆಗುವುದು ಕಾಂಗ್ರೆಸ್‌ನಲ್ಲಿ ಮಾತ್ರ; ಶರಣ್ ಪ್ರಕಾಶ್ ಪಾಟೀಲ್
ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ತಮ್ಮನ್ನ ಮರು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿರುವ ಸಚಿವ ಎಂ.ಬಿ ಪಾಟೀಲ್ (MB Patil), ಪಕ್ಷ ನೀಡುವ ಯಾವುದೇ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ.
ʻಪಬ್ಲಿಕ್ ಟಿವಿʼ (Public TV) ಜೊತೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಈ ಬಾರಿಯೂ ನನ್ನನ್ನ ಪರಿಗಣಿಸಿರುವುದಕ್ಕೆ ಹೈಕಮಾಂಡ್‌ಗೆ ಧನ್ಯವಾದಗಳು. ನನಗೆ ಇಂತಹದ್ದೇ ಖಾತೆಬೇಕು ಎಂದು ನಾನು ಕೇಳುವುದಿಲ್ಲ. ನಮ್ಮ ನಾಯಕರು ಯಾವ ಖಾತೆಯನ್ನ ನೀಡುತ್ತಾರೋ ಅದನ್ನ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹಿಂದಿನ ಆಡಳಿತಾವಧಿಯನ್ನು ನೆನಪಿಸಿಕೊಂಡ ಎಂಬಿಪಿ, ಈ ಹಿಂದೆ ನೀರಾವರಿ ಹಾಗೂ ಬೃಹತ್ ಕೈಗಾರಿಕಾ ಇಲಾಖೆಗಳನ್ನ ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ನನಗಿದೆ. ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ಆಡಳಿತಾವಧಿಯಲ್ಲಿ ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಮುಂದಿನ ಆಡಳಿತಕ್ಕೂ ಅವರ ಮಾರ್ಗದರ್ಶನ ನಮಗೆ ಅತ್ಯಗತ್ಯವಾಗಿದೆ ಎಂದಿದ್ದಾರೆ.
ಇದೇ ವೇಳೆ ಸಿಎಂ ಡಿ.ಕೆ ಶಿವಕುಮಾರ್ ಅವರ ಕುರಿತು ಮಾತನಾಡಿದ ಅವರು, ಈಗ ಡಿ.ಕೆ ಶಿವಕುಮಾರ್ ಅವರ ಜೊತೆಗೂ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅವರು ರಾಜ್ಯದಾದ್ಯಂತ ಪಕ್ಷವನ್ನ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದಾರೆ. ಮುಂದೆಯೂ ಅವರು ಸರ್ಕಾರದ ಭಾಗವಾಗಿ ಉತ್ತಮ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ತಮಗೆ ಯಾವ ಖಾತೆ ಸಿಗಲಿದೆ ಎಂಬುದು ತೀರ್ಮಾನವಾಗಿಲ್ಲ ಎಂದಿರುವ ಪಾಟೀಲ್, ಹಂಚಿಕೆಯಾಗುವ ಇಲಾಖೆಗೆ ಸಂಪೂರ್ಣ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಡಿಕೆಶಿ ಕೊಂಡಾಡಿದ ಶರಣ್ ಪ್ರಕಾಶ್ ಪಾಟೀಲ್
ಇನ್ನೂ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆಗೆ ನಮಗೆ ಅತ್ಯುತ್ತಮ ಸಹಕಾರ ನೀಡಿದ್ದಾರೆ. ಅವರು ನಿಜವಾದ ಜನಪರ ನಾಯಕ ಎಂದು ಪಕ್ಷದ ಒಗ್ಗಟ್ಟು ಮತ್ತು ನಾಯಕರ ಕೊಡುಗೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡರು.
ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜರ್ನಿಯನ್ನ ಸ್ಮರಿಸಿದ ಅವರು, ಡಿ.ಕೆ ಶಿವಕುಮಾರ್ ಅವರು ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ಇಂದು ಅವರಿಗೆ ಸಿಕ್ಕಿರುವ ಸ್ಥಾನಮಾನಗಳು ಅವರ ಕಠಿಣ ಶ್ರಮಕ್ಕೆ ಸಿಕ್ಕ ತಕ್ಕ ಫಲವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಶರಣಪ್ರಕಾಶ್ ಪಾಟೀಲ್, ಒಬ್ಬ ಸಾಮಾನ್ಯ ಕಾರ್ಯಕರ್ತ ಕೂಡ ಮುಖ್ಯಮಂತ್ರಿ ಹುದ್ದೆಗೆ ಏರಲು ಸಾಧ್ಯವಿರುವುದು ಕೇವಲ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಪಕ್ಷವು ತಳಮಟ್ಟದ ಶ್ರಮಕ್ಕೆ ಯಾವಾಗಲೂ ಗೌರವ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

