ಮೈಸೂರು: ರಾಜ್ಯಸಭೆಗೆ(Rajya Sabha) ನಾನು ಕೂಡ ಆಕಾಂಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ಈಗಾಗಲೇ ತಿಳಿಸಿದ್ದೇನೆ. ನಾನು ಈಗಾಗಲೇ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಆದರೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ರಾಜ್ಯಸಭೆಗೆ ಹೋಗುವ ಆಸೆ ಇದೆ ಎಂಬುದನ್ನು ಹೈಕಮಾಂಡ್ (High Command) ಗಮನಕ್ಕೆ ತಂದಿದ್ದೇನೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬದಲಾವಣೆ ಮಾಡುವುದನ್ನು ನಾವು ತೀರ್ಮಾನಿಸುವುದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಭಾರೀ ವ್ಯತ್ಯಯ – ಪಬ್ಲಿಕ್ ಟಿವಿ ಪ್ರಶ್ನೆಗೆ ಮುನಿಯಪ್ಪ ತರಲೆ ಉತ್ತರ!
ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರ ಅವಧಿ ಮುಗಿದ ಬಳಿಕ ಅಗತ್ಯವಿದ್ದರೆ ವರಿಷ್ಠರು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದು ಸದಾನಂದಗೌಡ ಸ್ಪಷ್ಟಪಡಿಸಿದರು.
16ನೇ ಲೋಕಸಭೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಮೊದಲ ಬಾರಿಗೆ 2014 ರಲ್ಲಿ ಡಿವಿಎಸ್ ಸಂಸದರಾಗಿ ಆಯ್ಕೆಯಾದರು. 17ನೇ ಲೋಕಸಭೆಗೆ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅವರ ವಿರುದ್ಧ ಜಯಗಳಿಸಿ ಎರಡನೇ ಬಾರಿಗೆ ಸಂಸದರಾದರು. 2024 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸಿ ಗೆದ್ದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ತುರ್ತು ಬುಲಾವ್‌ಗೆ ಸಿಎಂ ತಂತ್ರಗಾರಿಕೆ – ಆಪ್ತ ಸಚಿವರ ದಂಡಿನೊಂದಿಗೆ ದೆಹಲಿಗೆ ಪ್ರಯಾಣ

