– ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಪತಿ ಸೇರಿದಂತೆ ಯಾರೂ ಮಹಿಳೆಗೆ ಮನೆಗೆಲಸ ಹಾಗೂ ಪೋಷಕರನ್ನು ನೋಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ.
ಪತ್ನಿ(Wife) ಮತ್ತು ಮಗಳಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ (Husband) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಚಿಲ್ಲಾಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ಪ್ರಕಟಿಸಿದೆ
ಪತ್ನಿಯಾದವಳು ಕೇವಲ ಮನೆಗೆಲಸ ಮಾಡಿಕೊಂಡೇ ಇರಬೇಕು ಎಂದು ನಿರೀಕ್ಷಿಸುವಂತಿಲ್ಲ. ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಅವರ ಮಗ ಅಥವಾ ಮಗಳಿಗೆ ಸೇರಿದ್ದೇ ಹೊರತು ಅಳಿಯ ಅಥವಾ ಸೊಸೆಯದಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಭಾರತೀಯ ಮಹಿಳೆಯೊಬ್ಬಳು ತನ್ನ ತವರು ಮನೆಗೆ ಹೋಗಲು ಗಂಡನ ಮನೆಯಲ್ಲಿರುವ ಎಲ್ಲರ ಅನುಮತಿ ಪಡೆಯಬೇಕು ಎಂದು ನಿರೀಕ್ಷಿಸುವುದು ಯಾಕೆ? ವಿವಾಹವು ಮತ್ತೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ನಿಯಂತ್ರಿಸಲು, ಆಜ್ಞಾಪಿಸಲು, ಪ್ರಾಬಲ್ಯ ಸಾಧಿಸಲು ಅಥವಾ ವಶಪಡಿಸಿಕೊಳ್ಳಲು ನೀಡುವ ಪರವಾನಗಿ ಅಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.
ಮಹಿಳೆಗೆ ತನಗೆ ಇಷ್ಟಬಂದಾಗ ತವರು ಮನೆಗೆ ಭೇಟಿ ನೀಡುವ ಮೂಲಭೂತ ಹಕ್ಕಿದೆ. ಅದಕ್ಕಾಗಿ ಗಂಡನ ಮನೆಯಲ್ಲಿರುವ ಪ್ರತಿಯೊಬ್ಬರ ಅನುಮತಿ ಪಡೆಯಬೇಕೆಂಬ ನಿಯಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾ
ಕೂಲಿ ಕೆಲಸ ಮಾಡುತ್ತಿದ್ದ ಪತಿ ವಿಚಾರಣೆ ಸಮಯದಲ್ಲಿ, ನನ್ನ ಪೋಷಕರನ್ನು ಪತ್ನಿ ನೋಡಿಕೊಳ್ಳುತ್ತಿರಲಿಲ್ಲ. ಸರಿಯಾಗಿ ಮನೆಗೆಲಸ ಮಾಡುತ್ತಿರಲಿಲ್ಲ ಹಾಗೂ ನನ್ನ ಅನುಮತಿಯಿಲ್ಲದೆ ಹಲವು ಬಾರಿ ತವರು ಮನೆಗೆ ಹೋಗಿದ್ದಳು ಎಂದು ಆರೋಪಿಸಿದ್ದ. ಇದಕ್ಕೆ ಪ್ರತಿಯಾಗಿ ಪತ್ನಿಯು, ಪತಿಯ ಜೂಜು ಮತ್ತು ಮದ್ಯಪಾನದ ಚಟ ಹಾಗೂ ಆತನ ಕುಟುಂಬಸ್ಥರಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದಾಗಿ ತಿಳಿಸಿದ್ದಳು.
ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯವು, ಆತನ ನಡವಳಿಕೆಯು ಮಾಲೀಕ ಮತ್ತು ನೌಕರನ ನಡುವಿನ ಸಂಬಂಧದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಂತಿಮವಾಗಿ ಹೈಕೋರ್ಟ್ ಪತ್ನಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಪತಿಯ ಅರ್ಜಿಯನ್ನು ವಜಾಗೊಳಿಸಿದೆ.
