ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ (Hampi) ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹೆಮ್ಮೆಯ ಆನೆ ‘ಲಕ್ಷ್ಮಿ’ ಯನ್ನು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ (Forest Department) ಮುಂದಾಗಿರುವುದು ಈಗ ತೀವ್ರ ಸ್ವರೂಪದ ಆಕ್ರೋಶಕ್ಕೆ ಕಾರಣವಾಗಿದೆ. ಅನಾರೋಗ್ಯದ ಕಾರಣ ನೀಡಿ ಲಕ್ಷ್ಮಿಯನ್ನು (Lakshmi) ಹಂಪಿಯಿಂದ ಕೋಲಾರಕ್ಕೆ ಕಳುಹಿಸುವ ಸರ್ಕಾರದ ನಿರ್ಧಾರಕ್ಕೆ ಸ್ಥಳೀಯರು ಹಾಗೂ ಮಾವುತನ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಿ ಆನೆಯನ್ನು ಲಾರಿಗೆ ಹತ್ತಿಸಿ ಕರೆದೊಯ್ಯಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಂತೆ, ವರ್ಷಗಳಿಂದ ಆನೆಯನ್ನು (Elephant) ಮಗುವಿನಂತೆ ಸಾಕಿದ್ದ ಮಾವುತನ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು. ಮಾವುತನ ಪತ್ನಿ ಹಾಗೂ ಮಕ್ಕಳು ಆನೆಯ ಸೊಂಡಿಲನ್ನು ಹಿಡಿದು ಅದರ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ನಮ್ಮ ಲಕ್ಷ್ಮಿಯನ್ನು ನಮ್ಮಿಂದ ದೂರ ಮಾಡಬೇಡಿ, ಅವಳು ಇಲ್ಲೇ ಇರಲಿ” ಎಂದು ಗೋಳಾಡಿದ ಮಾವುತನ ಕುಟುಂಬದ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

ಆನೆ ಸ್ಥಳಾಂತರದ ಸುದ್ದಿ ತಿಳಿಯುತ್ತಿದ್ದಂತೆ ಹಂಪಿ, ಕಮಲಾಪುರ, ಕಡ್ಡಿರಾಂಪುರ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ದೇವಸ್ಥಾನದ ಮುಂದೆ ಜಮಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. “ಮೂರು ತಿಂಗಳ ಚಿಕಿತ್ಸೆ ಎಂದು ಹೇಳಿ ಒಮ್ಮೆ ಕರೆದೊಯ್ದರೆ, ಲಕ್ಷ್ಮಿಯನ್ನು ಮತ್ತೆ ಹಂಪಿಗೆ ವಾಪಸ್ ಕರೆತರುವುದಿಲ್ಲ” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ಪಲ್ಟಿ – 13 ಪ್ರವಾಸಿಗರು ಸೇಫ್
ಸ್ಥಳದಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹಂಪಿ ವಿರೂಪಾಕ್ಷ ದೇಗುಲದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಜನರ ಭಾವನೆ ಮತ್ತು ಅಧಿಕಾರಿಗಳ ಆದೇಶದ ನಡುವೆ ಹಂಪಿಯಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
