– ಆಯೋಗದಲ್ಲಿ ಯಾವ್ದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದರೆ, ಬಹುಮತದ ಅಭಿಪ್ರಾಯವೇ ಅಂತಿಮ
– ‘ಕಾರ್ಯನಿರ್ವಹಣೆಯ ವ್ಯವಹಾರ’ ಅಧ್ಯಾಯ ಹೇಳುವುದೇನು?
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆದು, ಬಂಧಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರಿದಿದೆ. ವಾರಾಂತ್ಯದಲ್ಲಿ ದೆಹಲಿ ಪೊಲೀಸರು ಸುಮಾರು 7,000 ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಗಾರಿಕೆಯನ್ನು ಚುನಾವಣಾ ಆಯೋಗ ಹೊಂದಿರುವುದರಿಂದ, ಅದರ ಕಾರ್ಯವೈಖರಿ ಹಲವು ಬಾರಿ ಪರಿಶೀಲನೆಗೆ ಒಳಗಾಗಿದೆ. ಹಾಗಾದರೆ ಚುನಾವಣಾ ಆಯೋಗವನ್ನು ಮೊದಲ ಬಾರಿಗೆ ಹೇಗೆ ಸ್ಥಾಪಿಸಲಾಯಿತು? ಏಕಸದಸ್ಯ ಸಂಸ್ಥೆಯಾಗಿದ್ದ ಅದು ಮೂರು ಸದಸ್ಯರ ಆಯೋಗವಾಗಿ, ನಂತರ ಮತ್ತೆ ಏಕಸದಸ್ಯ ಸಂಸ್ಥೆಯಾಗಿ, ಬಳಿಕ ಮತ್ತೆ ಮೂರು ಸದಸ್ಯರ ಆಯೋಗವಾಗಿ ಬದಲಾಗಿದ್ದು ಏಕೆ? ಚುನಾವಣಾ ಆಯೋಗಕ್ಕೆ ಹಣಕಾಸು ಹೇಗೆ ಒದಗಿಸಲಾಗುತ್ತದೆ? ಎಂಬ ವಿವರವನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು ಹೇಗೆ?
ಭಾರತೀಯ ಚುನಾವಣಾ ಆಯೋಗವು ಶಾಶ್ವತ ಸಾಂವಿಧಾನಿಕ ಸಂಸ್ಥೆಯಾಗಿದೆ. ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, ಇದನ್ನ 1950ರ ಜನವರಿ 25ರಂದು ಸ್ಥಾಪಿಸಲಾಯಿತು. ಸಂಸತ್ತು ಮತ್ತು ಪ್ರತಿಯೊಂದು ರಾಜ್ಯದ ವಿಧಾನಸಭೆಗಳಿಗೆ, ಹಾಗೆಯೇ ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ನಡೆಯುವ ಚುನಾವಣೆಗಳ ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣವನ್ನು ಚುನಾವಣಾ ಆಯೋಗಕ್ಕೆ ಸಂವಿಧಾನ ವಹಿಸಿದೆ.

ಚುನಾವಣಾ ಆಯೋಗದಲ್ಲಿ ಯಾರ್ಯಾರು ಇರುತ್ತಾರೆ?
ಆರಂಭದಲ್ಲಿ ಆಯೋಗದಲ್ಲಿ ಕೇವಲ ಒಬ್ಬ ಮುಖ್ಯ ಚುನಾವಣಾ ಆಯುಕ್ತರು (CEC) ಮಾತ್ರ ಇದ್ದರು. ಈಗ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನ (ECs) ಒಳಗೊಂಡಿದೆ. ಸಂವಿಧಾನದ 324ನೇ ವಿಧಿಯು ಆಯೋಗದಲ್ಲಿ ಎಷ್ಟು ಸದಸ್ಯರು ಇರಬೇಕು ಎಂಬುದನ್ನ ನಿರ್ದಿಷ್ಟವಾಗಿ ಹೇಳುವುದಿಲ್ಲ.
ಚುನಾವಣಾ ಆಯುಕ್ತರನ್ನ ಆಯ್ಕೆ ಮಾಡೋದು ಯಾರು?
ಭಾರತದ ಚುನಾವಣಾ ಆಯುಕ್ತರನ್ನು ಪ್ರಧಾನ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
1991ರ ಚುನಾವಣಾ ಆಯೋಗದ (ಸೇವಾ ಷರತ್ತುಗಳು) ಕಾಯ್ದೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ (CEC) ಮತ್ತು ಇತರ ಚುನಾವಣಾ ಆಯುಕ್ತರ (EC) ʻಆಯ್ಕೆ ಅಥವಾ ನೇಮಕಾತಿ ವಿಧಾನʼಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಅಥವಾ ಪ್ರತ್ಯೇಕ ನಿಯಮಾವಳಿಗಳು ಇರಲಿಲ್ಲ. ಬದಲಿಗೆ, ಈ ಕಾಯ್ದೆಯು ಕೇವಲ ಅವರ ಸೇವಾ ಅವಧಿ, ವೇತನ ಮತ್ತು ನಿವೃತ್ತಿ ವಯಸ್ಸನ್ನು ನಿರ್ಧರಿಸಲು ಮಾತ್ರ ಸೀಮಿತವಾಗಿತ್ತು. ಆದ್ರೆ ಕೇಂದ್ರ ಸರ್ಕಾರ 2023ರಲ್ಲಿ ಚುನಾವಣಾ ಆಯುಕ್ತರ ಆಯ್ಕೆಗಾಗಿ ಹೊಸ ಕಾನೂನು ತಂದಿತು.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯ್ದೆ, 2023 ಅನ್ನು ಜಾರಿಗೆ ತಂದಿತು. ಈ ಕಾನೂನು ಜನವರಿ 2024 ರಿಂದ ಜಾರಿಗೆ ಬಂದಿದೆ. ಮಾರ್ಚ್ 2023 ರಲ್ಲಿ ಸುಪ್ರೀಂ ಕೋರ್ಟ್ (ಅನೂಪ್ ಬರನ್ವಾಲ್ ಪ್ರಕರಣ) ನೀಡಿದ್ದ ಮಧ್ಯಂತರ ತೀರ್ಪಿನ ಪ್ರಕಾರ, ಈ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಇರಬೇಕೆಂದು ಸೂಚಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ತಂದ ಹೊಸ ಕಾಯ್ದೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಬದಲಾಗಿ ‘ಕೇಂದ್ರ ಸಚಿವರನ್ನು’ ಸೇರಿಸಲಾಯಿತು. ಇದರಿಂದಾಗಿ ನೇಮಕಾತಿಯಲ್ಲಿ ಆಡಳಿತ ಸರ್ಕಾರಕ್ಕೇ ಬಹುಮತ (2:1) ಸಿಗುತ್ತದೆ ಮತ್ತು ಇದು ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಯಿತು. ಪ್ರಕರಣದ ಅಂತಿಮ ನಿರ್ಧಾರಕ್ಕಾಗಿ ಈ ವಿಷಯವನ್ನ ಭಾರತದ ಮುಖ್ಯ ನ್ಯಾಯಮೂರ್ತಿಗಳ (CJI) ನೇತೃತ್ವದ ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿದೆ.

ಅಧಿಕಾರ ಅವಧಿ ಹೇಗಿರುತ್ತೆ?
ಚುನಾವಣಾ ಆಯುಕ್ತರು 6 ವರ್ಷ ಅವಧಿ ಅಥವಾ 65 ವರ್ಷ ವಯಸ್ಸಿನವರೆಗೆ, ಇವೆರಡರಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಇವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ದೊರೆಯುವ ಸ್ಥಾನಮಾನ, ವೇತನ ಮತ್ತು ಸೌಲಭ್ಯಗಳೇ ದೊರೆಯುತ್ತವೆ. ಇದೇ ರೀತಿ, ಮುಖ್ಯ ಚುನಾವಣಾ ಆಯುಕ್ತರನ್ನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಂತೆ ಸಂಸತ್ತಿನ ಮೂಲಕ ಮಾತ್ರ ಪದಚ್ಯುತಗೊಳಿಸಲು ಸಾಧ್ಯ. ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಮತ್ತು ರಾಷ್ಟ್ರಪತಿ ಕಾಲಕಾಲಕ್ಕೆ ನಿಗದಿಪಡಿಸುವಷ್ಟು ಇತರ ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು, ಸಂಸತ್ತು ರೂಪಿಸುವ ಕಾನೂನಿನ ನಿಬಂಧನೆಗಳಿಗೆ ಒಳಪಟ್ಟು, ರಾಷ್ಟ್ರಪತಿ ನೇಮಕ ಮಾಡುತ್ತಾರೆ ಎಂದು 324ನೇ ವಿಧಿ ಹೇಳುತ್ತದೆ.
ಚುನಾವಣಾ ಆಯೋಗ 3 ಸದಸ್ಯ ಪೀಠವಾಗಿ ಬದಲಾಗಿದ್ದು ಹೇಗೆ?
ಸುಮಾರು 4 ದಶಕಗಳ ಕಾಲ ಚುನಾವಣಾ ಆಯೋಗವು ಏಕಸದಸ್ಯ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಿತು. 9ನೇ ಲೋಕಸಭಾ ಚುನಾವಣೆಗೂ ಮುನ್ನ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಯಿತು. 53 ವರ್ಷಕ್ಕೂ ಹೆಚ್ಚು ಕಾಲ ಭಾರತದ ಚುನಾವಣಾ ಆಯೋಗದಲ್ಲಿ ಸೇವೆ ಸಲ್ಲಿಸಿದ್ದ ಎಸ್. ಕೆ. ಮೆಂದಿರತ್ತಾ ಅವರು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ, ಕಾಂಗ್ರೆಸ್ ನೇತೃತ್ವದ ರಾಜೀವ್ ಗಾಂಧಿ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತ ಆರ್. ವಿ. ಎಸ್. ಪೆರಿ ಶಾಸ್ತ್ರಿ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆ ಆಯೋಗವನ್ನು ವಿಸ್ತರಿಸಲಾಗಿತ್ತು ಎಂದು ಹೇಳಿದ್ದರು.
ಈ ಭಿನ್ನಾಭಿಪ್ರಾಯಗಳು 1987ರ ರಾಷ್ಟ್ರಪತಿ ಚುನಾವಣೆಯಿಂದ ಆರಂಭವಾದವು. ರಾಜೀವ್ ಅವರೊಂದಿಗೆ ಭಿನ್ನ ಹೊಂದಿದ್ದ ಜ್ಞಾನಿ ಜೈಲ್ ಸಿಂಗ್ ಅವರು 2ನೇ ಅವಧಿಗೆ ಸ್ಪರ್ಧಿಸದಂತೆ ರಾಷ್ಟ್ರಪತಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಬಯಸಿತ್ತು. ಆದರೆ ಪೆರಿ ಶಾಸ್ತ್ರಿ ಇದಕ್ಕೆ ಒಪ್ಪಲಿಲ್ಲ. 2 ವರ್ಷಗಳ ನಂತರ ಲೋಕಸಭಾ ಚುನಾವಣೆಗಳು ಎದುರಾದಾಗ, ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಸರ್ಕಾರಕ್ಕೆ ಖಚಿತತೆ ಇರಲಿಲ್ಲ. ಹೀಗಾಗಿ ಮುಖ್ಯ ಚುನಾವಣಾ ಆಯುಕ್ತರ ಅಧಿಕಾರವನ್ನ ಮೊಟಕುಗೊಳಿಸಲು ಚುನಾವಣಾ ಆಯೋಗವನ್ನು ಬಹುಸದಸ್ಯ ಸಂಸ್ಥೆಯನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿತ್ತುʼ ಎಂದು ಮೆಂದಿರತ್ತಾ 2019ರಲ್ಲಿ ಹೇಳಿದ್ದರು.
1989ರ ಅಕ್ಟೋಬರ್ 7ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ 2 ಹುದ್ದೆಗಳನ್ನ ಸೃಷ್ಟಿಸಲಾಯಿತು. ಅಕ್ಟೋಬರ್ 16ರಂದು ಎಸ್.ಎಸ್. ಧನೋವಾ ಮತ್ತು ವಿ.ಎಸ್ ಸೀಗಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಮೂವರು ಚುನಾವಣಾ ಆಯುಕ್ತರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದರೂ, ಆಯೋಗದ ಕಾರ್ಯನಿರ್ವಹಣೆಗೆ ಯಾವುದೇ ನಿಯಮಗಳಿಲ್ಲದಿದ್ದರೂ, 1989ರ ಲೋಕಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಮೆಂದಿರತ್ತಾ ವಿವರಿಸಿದ್ದರು.

ಮತ್ತೆ ಏಕಸದಸ್ಯ ಆಯೋಗ
ಬಹು ಸದಸ್ಯರ ವ್ಯವಸ್ಥೆ ಹೆಚ್ಚು ಕಾಲ ಮುಂದುವರಿಯಲಿಲ್ಲ. ಪ್ರಧಾನಮಂತ್ರಿ ವಿ.ಪಿ ಸಿಂಗ್ ಅಧಿಕಾರಕ್ಕೆ ಬಂದ ಕೂಡಲೇ, 1989ರ ಅಕ್ಟೋಬರ್ 7ರ ರಾಷ್ಟ್ರಪತಿ ಅಧಿಸೂಚನೆಯನ್ನ ರದ್ದುಗೊಳಿಸಿತು. ಧನೋವಾ ತಮ್ಮ ಪದಚ್ಯುತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನ ವಜಾಗೊಳಿಸಿತು. ಆದರೆ ಆಯೋಗದ ಕುರಿತು ನ್ಯಾಯಾಲಯವು, ʻಒಬ್ಬರಿಗಿಂತ ಹೆಚ್ಚಿನ ತಲೆಗಳು ಉತ್ತಮʼ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ, ಆಯೋಗವನ್ನು ಮತ್ತೆ ಬಹುಸದಸ್ಯ ಸಂಸ್ಥೆಯನ್ನಾಗಿ ಮಾಡಿದರೆ ಅದರ ಕಾರ್ಯನಿರ್ವಹಣೆಗೆ ನಿಯಮಗಳನ್ನು ರೂಪಿಸುವ ವ್ಯವಸ್ಥೆ ಇರಬೇಕು ಎಂದು ಹೇಳಿತ್ತು.
ನಂತರ ಅಂದಿನ ಸರ್ಕಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು) ಕಾಯ್ದೆ, 1991 ಅನ್ನು ಜಾರಿಗೆ ತಂದಿತು. ಈ ಕಾಯ್ದೆಯು ಮುಖ್ಯ ಚುನಾವಣಾ ಆಯುಕ್ತರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ಸಮಾನ ಸ್ಥಾನಮಾನ ನೀಡಿತು ಮತ್ತು ಅವರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ನಿಗದಿಪಡಿಸಿತು. ಚುನಾವಣಾ ಆಯುಕ್ತರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಮಾನ ನೀಡಲಾಗಿತ್ತು. ಅವರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ಆಗ ಆಯೋಗದ ಕಾರ್ಯನಿರ್ವಹಣೆಯನ್ನ ನಿಯಂತ್ರಿಸುವ ಯಾವುದೇ ನಿಯಮಗಳು ಕಾಯ್ದೆಯಲ್ಲಿ ಇರಲಿಲ್ಲ. ಆದಾಗ್ಯೂ, ಮುಂದಿನ ಎರಡು ವರ್ಷಗಳ ಕಾಲ ಚುನಾವಣಾ ಆಯೋಗವು ಏಕಸದಸ್ಯ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಿತು.
1993ರಲ್ಲಿ ಮತ್ತೆ ಮೂರು ಸದಸ್ಯರ ಆಯೋಗ
1990ರ ಡಿಸೆಂಬರ್ 12ರಂದು ಟಿ. ಎನ್. ಶೇಷನ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಆಯೋಗದ ಸ್ವಾಯತ್ತತೆಯನ್ನ ಪ್ರತಿಪಾದಿಸುತ್ತಿದ್ದ ಶೇಷನ್ ಅವರ ನಿಲುವಿನಿಂದ ಅಸಮಾಧಾನಗೊಂಡ ಪಿ.ವಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 1993ರ ಅಕ್ಟೋಬರ್ 1ರಂದು ಚುನಾವಣಾ ಆಯೋಗವನ್ನ ಮತ್ತೆ ವಿಸ್ತರಿಸಿತು. ಎಂ.ಎಸ್.ಗಿಲ್ ಮತ್ತು ಜಿ.ವಿ.ಜಿ ಕೃಷ್ಣಮೂರ್ತಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು) ಕಾಯ್ದೆ, 1991ಕ್ಕೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲಾಯಿತು. ಕಾಯ್ದೆಯ ಹೆಸರನ್ನು ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಸೇವಾ ಷರತ್ತುಗಳು ಮತ್ತು ಕಾರ್ಯನಿರ್ವಹಣೆಯ ವ್ಯವಹಾರ) ಕಾಯ್ದೆ, 1991 ಎಂದು ಬದಲಾಯಿಸಲಾಯಿತು.
ಸರ್ಕಾರವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನ ಸಮಾನ ಸ್ಥಾನಕ್ಕೆ ತಂದಿತು. ಮೂವರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ಸ್ಥಾನಮಾನ ನೀಡಲಾಯಿತು. ಜೊತೆಗೆ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ನಿಗದಿಪಡಿಸಲಾಯಿತು. ಅಂದರೆ, ಮೂವರು ಆಯುಕ್ತರಿಗೂ ಸಮಾನ ನಿರ್ಧಾರ ಕೈಗೊಳ್ಳುವ ಅಧಿಕಾರ ದೊರೆಯಿತು ಎಂದು ಮೆಂದಿರತ್ತಾ ಹೇಳಿದ್ದಾರೆ.
ಬಹುಮತದ ಅಭಿಪ್ರಾಯವೇ ಅಂತಿಮ
ಕಾಯ್ದೆಯಲ್ಲಿ ‘ಕಾರ್ಯನಿರ್ವಹಣೆಯ ವ್ಯವಹಾರ’ ಎಂಬ ಹೊಸ ಅಧ್ಯಾಯ ಸೇರಿಸಲಾಯಿತು. ಇದರಲ್ಲಿ 9, 10 ಮತ್ತು 11ನೇ ಸೆಕ್ಷನ್ಗಳಿದ್ದವು. ಈ ಮೂರು ಸೆಕ್ಷನ್ಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ತಮ್ಮ ನಿರ್ಧಾರಗಳಲ್ಲಿ ಒಮ್ಮತಕ್ಕೆ ಬರುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದವು. ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ, ಬಹುಮತದ ಅಭಿಪ್ರಾಯವೇ ಅಂತಿಮವಾಗಬೇಕು ಎಂದು ಅವು ನಿಗದಿಪಡಿಸಿದವು. ಶೇಷನ್ ಅವರು ಈ ಮೂರು ನಿಬಂಧನೆಗಳು ತಮ್ಮ ಅಧಿಕಾರವನ್ನು ಮೊಟಕುಗೊಳಿಸುವ ಸರ್ಕಾರದ ಪ್ರಯತ್ನ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಮುಖ್ಯ ನ್ಯಾಯಮೂರ್ತಿ ಎ. ಎಂ. ಅಹ್ಮದಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಅರ್ಜಿಯನ್ನು ವಜಾಗೊಳಿಸಿತು. ಟಿ. ಎನ್. ಶೇಷನ್, ಮುಖ್ಯ ಚುನಾವಣಾ ಆಯುಕ್ತರು ವಿರುದ್ಧ ಭಾರತ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ 1995ರ ಜುಲೈ 14ರಂದು ಈ ತೀರ್ಪು ನೀಡಲಾಯಿತು. ಆಗಿನಿಂದ ಚುನಾವಣಾ ಆಯೋಗವು ಮೂರು ಸದಸ್ಯರ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಿದೆ.
ಚುನಾವಣಾ ಆಯೋಗಕ್ಕೆ ಹಣಕಾಸು ಹೇಗೆ ಒದಗಿಸಲಾಗುತ್ತದೆ?
ಚುನಾವಣಾ ಆಯೋಗದ ವೆಬ್ಸೈಟ್ ಮಾಹಿತಿ ಪ್ರಕಾರ, ಆಯೋಗದ ಕಾರ್ಯದರ್ಶಾಲಯವು ಸ್ವತಂತ್ರ ಬಜೆಟ್ ಹೊಂದಿದೆ. ಈ ಬಜೆಟ್ ಅನ್ನು ಆಯೋಗ ಮತ್ತು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ನಡುವೆ ನೇರ ಸಮಾಲೋಚನೆಯ ಮೂಲಕ ಅಂತಿಮಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಆಯೋಗದ ಬಜೆಟ್ಗೆ ಸಂಬಂಧಿಸಿದ ಶಿಫಾರಸುಗಳನ್ನ ಹಣಕಾಸು ಸಚಿವಾಲಯ ಅಂಗೀಕರಿಸುತ್ತದೆ.
ಚುನಾವಣೆ ಹೊರತುಪಡಿಸಿ ಆಯೋಗದ ಜವಾಬ್ದಾರಿ ಏನು?
ಚುನಾವಣಾ ಆಯೋಗವು ಹಾಲಿ ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ವಿಷಯಗಳಲ್ಲಿ ಸಲಹಾ ಅಧಿಕಾರವನ್ನು ಹೊಂದಿದೆ.

