– ಕಬಿನಿ, ಕೆಆರ್ಎಸ್, ಹೇಮಾವತಿ, ಹಾರಂಗಿ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿತ
ಮಂಡ್ಯ: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ (CWMA) ಸಭೆ ನಡೆಯುತ್ತಿದ್ದೆ. ಇಂದಾದರೂ ಕರ್ನಾಟಕದ ಪರ ನ್ಯಾಯ ಸಿಗುತ್ತಾ? ಎಂಬ ಕಳವಳ ಕಾವೇರಿ ಕೊಳ್ಳದ ರೈತರನ್ನ ಕಾಡುತ್ತಿದೆ.
ಹಿಂದಿನ ಎಲ್ಲ ಸಭೆಗಳಲ್ಲೂ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿತ್ತು, ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಪದೇ ಪದೇ ಆದೇಶ ಹೊರಡಿಸುತ್ತಿರುವುದು ರೈತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 9 ರಂದು ಕಳೆದ ಬಾರಿಯ ಸಭೆಯಲ್ಲೂ 15 ದಿನ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶಿಸಿತ್ತು. ಅದಕ್ಕೂ ಮುನ್ನ 15 ದಿನಗಳ ಕಾಲ 9 ಸಾವಿರದಿಂದ 12 ಸಾವಿರ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಡಲು ಸೂಚಿಸಲಾಗಿತ್ತು.

ಬತ್ತುತ್ತಿರುವ ಜಲಾಶಯಗಳು
ಕಬಿನಿ, ಕೆ.ಆರ್.ಎಸ್, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಈಗ ಕೇವಲ 105 ಅಡಿಗೆ ಕುಸಿದಿದೆ. ತಮಿಳುನಾಡಿಗೆ ನೀರು ಹರಿಸಲು ಹೇಮಾವತಿ ಡ್ಯಾಮಿನಿಂದಲೂ KRS ಗೆ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಪರಿಣಾಮವಾಗಿ ಹೇಮಾವತಿ ಜಲಾಶಯದ ನೀರಿನ ಮಟ್ಟವೂ ಸಹ ಕುಸಿತ ಕಂಡಿದೆ.
ರೈತರ ಆತಂಕ ಏನು?
ಮಂಡ್ಯ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಇದರ ಮಧ್ಯೆ ದೆಹಲಿಯಲ್ಲಿ ನಡೆಯುತ್ತಿರುವ ಇಂದಿನ ಸಭೆಯಲ್ಲಿ ಮತ್ತೆ ಏನಾದರೂ ವ್ಯತಿರಿಕ್ತ ಆದೇಶ ಬಂದು ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿದರೆ, ಜಲಾಶಯಗಳ ನೀರಿನ ಮಟ್ಟ ಸಂಪೂರ್ಣ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ.
ಇಂದಿನ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ವಾಸ್ತವಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಕನ್ನಡಿಗರ ಪಾಲಿಗೆ ಒಮ್ಮೆಯಾದರೂ ರಿಲೀಫ್ ನೀಡುವ ಆದೇಶ ತರುತ್ತಾರಾ ಕಾದು ನೋಡಬೇಕಿದೆ.

