DistrictsKarnatakaLatestMain PostRamanagara

ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೆ ಕಷ್ಟ: ಎಚ್‌ಡಿಕೆ

ರಾಮನಗರ: ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದ ಎಂಇಎಸ್ ಸಂಘಟನೆ ನಿಷೇಧಕ್ಕೆ ವಿವಿಧ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ನಿಂದ ರಾಜ್ಯದ ಜನತೆಗೆ ತೊಂದರೆ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ವಿವಿಧ ಸಂಘಟನೆಗಳು ಕರೆ ನೀಡಿದೆ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ ಎಂದು ತಿಳಿಸಿದರು.

ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಮುಲಾಜಿಲ್ಲದೆ ಮುಂದಾಗಬೇಕು. ಕಠಿಣ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮೀನಮೇಷ ಇಲ್ಲದೇ ಮುಂದಾಗಬೇಕು. ಬಂದ್ ಘೋಷಣೆಯಿಂದ ನಮ್ಮ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್‌ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದರು.

ಬಂದ್‌ನಿಂದ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆಗುತ್ತದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನ್ನಡ ದ್ರೋಹಿಗಳನ್ನು ಹತ್ತಿಕ್ಕಲು ಏನು ಬೇಕೋ ಆ ಕ್ರಮ ಕೈಗೊಳ್ಳಲು ಒತ್ತಡ ಹೇರಬೇಕು ಎಂದು ಸಲಹೆ ಮಾಡಿದರು.

ಎಂಇಎಸ್ ಸಂಘಟನೆಯನ್ನು ಕಾನೂನಾತ್ಮಕವಾಗಿ ನಿಷೇಧ ಮಾಡಬೇಕು. ಸರಿಯಾದ ತೀರ್ಮಾನ ಮಾಡಬೇಕು. ಕೋರ್ಟ್ ಗೆ ಹೋಗಿ ತಡೆ ತರುವಂತೆ ನಿಷೇಧ ಹೇರಬಾರದು. ಸರ್ಕಾರ ಈ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಅವರು ಸರಕಾರಕ್ಕೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

ಪಕ್ಷದ ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಂದ್‌ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ. ಹೋರಾಟಗಾರರು ಒಮ್ಮೆ ಈ ಬಗ್ಗೆ ಆಲೋಚನೆ ಮಾಡಲಿ ಎಂದರು.

ಬೆಳಗಾವಿ ಕಲಾಪ ವ್ಯರ್ಥವಾಗಿದೆ: ನಾಡಿನ ಜನ ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಉತ್ತರ ಕರ್ನಾಟಕದ ಜನ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯಲಿಲ್ಲ. ಸದನ ಕಲಾಪವನ್ನು ಸಂಪೂರ್ಣ ವ್ಯರ್ಥ ಮಾಡಿದ್ದಾರೆ. ಅದರಲ್ಲೂ ಮೊದಲ 5 ದಿನದ ಕಲಾಪ ಸಂಪೂರ್ಣ ವ್ಯರ್ಥವಾಗಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂಗೆ ಚಿಂತನೆ

ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿಲ್ಲ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆಯೂ ಚರ್ಚಿಸಿಲ್ಲ. ಸಂಡೂರು ತಹಶೀಲ್ದಾರ್, ಬೈರತಿ ಬಸವರಾಜ್ ಪ್ರಕರಣಗಳ ಬಗ್ಗೆ ವೃಥಾ ಚರ್ಚೆ ನಡೆಸಿದ್ದಾರೆ. ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತೋ ಅದಕ್ಕೆ ಪ್ರಾರಂಭಿಕ ಹಂತದಲ್ಲಿ ನೀಡಿಲ್ಲ. ಕೊನೆಯ ಎರಡು ದಿನವೆಂದು ಆಗ ಕೂಡ ಸರಿಯಾದ ಚರ್ಚೆ ನಡೆಯಲಿಲ್ಲ. ಇದನ್ನೂ ಓದಿ: ವಾಜಪೇಯಿ ಜನ್ಮ ದಿನಾಚರಣೆ ಆಚರಿಸಿದ ರಮೇಶ್ ಜಾರಕಿಹೊಳಿ

ಸರ್ಕಾರದವರು ಕೊನೆಯಲ್ಲಿ ಮತಾಂತರ ವಿಚಾರ ತಂದರು. ಸದನದ ಕಲಾಪ ನಡೆಯಬೇಕೆಂಬ ಆಶಯ ಈಡೇರಲಿಲ್ಲ. ಕೆಲವರು ಈ ನಿಟ್ಟಿನಲ್ಲಿ ಯೋಚಿಸುತ್ತಾರೆ. ಆದರೆ ಅವರ ಆಶಯ ಈಡೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವೆ: ಸಿಎಂ

Leave a Reply

Your email address will not be published.

Back to top button